Thursday, October 2, 2025

ಸಿದ್ದರಾಮಯ್ಯನವರೇ ರಾಜೀನಾಮೆ ಕೊಟ್ಟು ರಾಜ್ಯ ಉಳಿಸಿ: ಆರ್. ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಅನುದಾನ ಹಂಚಿಕೆ ಕುರಿತು ಕಾನೂನು ಸುವ್ಯವಸ್ಥೆ ಮಾತ್ರವಲ್ಲದೆ ರಾಜಕೀಯ ವಲಯದಲ್ಲಿಯೂ ಚರ್ಚೆ ತೀವ್ರಗೊಂಡಿದೆ. ಇತ್ತೀಚಿನ ಬೆಳವಣಿಗೆಗಳ ನಡುವೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಟೀಕೆ ನಡೆಸಿದ್ದಾರೆ.

ಅನುದಾನ ವಿಷಯವಾಗಿ ಸಚಿವ ಚಲುವರಾಯಸ್ವಾಮಿ ಅವರು ಸಿಎಂಗೆ ಮನವಿ ಸಲ್ಲಿಸಿದ ಘಟನೆಯ ಹಿನ್ನೆಲೆಯಲ್ಲಿ, ಆರ್. ಅಶೋಕ್ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ “ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೃಷಿ ಸಚಿವರು ತಮ್ಮ ಕ್ಷೇತ್ರದ ಪರಿಶಿಷ್ಟ ಪಂಗಡ ಕಾಲೋನಿಗಳ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿಗಾಗಿ ಸಿಎಂ ಬಳಿ ಮನವಿ ಮಾಡಬೇಕಾಗಿದೆ ಅಂದರೆ, ರಾಜ್ಯ ಸರ್ಕಾರ ಎಷ್ಟು ದುರ್ಬಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ‘ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕಾಗಿದೆ’ ಎಂದು ಹೇಳಿದರು. ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ‘ರಸ್ತೆ ಬೇಕಾದರೆ ಗ್ಯಾರೆಂಟಿ ಯೋಜನೆ ಸ್ಥಗಿತಗೊಳಿಸಬೇಕು’ ಎಂದಿದ್ದಾರೆ. ಗವಿಯಪ್ಪ ಶಾಸಕರು ಇನ್ನೂ ಮುಂದೆ ಹೋಗಿ “ಇದೇ ಸ್ಥಿತಿ ಮುಂದುವರಿದರೆ ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿ.ಆರ್. ಪಾಟೀಲ, ರಾಜು ಕಾಗೆ ಸೇರಿದಂತೆ ಅನೇಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅನುದಾನ ಕೊರತೆಯಿಂದ ಕಾರ್ಯ ನಿರ್ವಹಣೆಗೆ ತೊಂದರೆ ಎದುರಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಅಸಮಾಧಾನಗಳ ನಡುವೆ ಆರ್. ಅಶೋಕ್ ಅವರು “ಇನ್ನೆಷ್ಟು ದಿನ ಈ ಭಂಡ ಬಾಳು? ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ರಾಜ್ಯವನ್ನು ಉಳಿಸಲಿ” ಎಂದು ಹೇಳಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿ ಹಾಗೂ ಅನುದಾನ ಹಂಚಿಕೆ ಕುರಿತು ಎದ್ದಿರುವ ಈ ವಿವಾದ ಮುಂದಿನ ದಿನಗಳಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಬಿಸಿ ಮಾಡಲಿದೆ ಎಂಬುದು ರಾಜಕೀಯ ವಲಯದ ಅಭಿಪ್ರಾಯ.