Friday, January 9, 2026

ಸಿದ್ದರಾಮಯ್ಯ 5 ವರ್ಷವೂ ಸಿಎಂ: ಅರ್ಧ-ಗಿರ್ಧ ಅನ್ನೋದು ಎಲ್ಲಿಯೂ ಇಲ್ಲ

ಹೊಸದಿಗಂತ ದಾವಣಗೆರೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಮುರಿದಿರುವುದು ಶೋಷಿತ ಮತ್ತು ಹಿಂದುಳಿದ ವರ್ಗದ ಜನರಿಗೆ ಹೆಮ್ಮೆಯ ವಿಷಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬುಧವಾರ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ದೀರ್ಘಕಾಲದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ. ಅವರು ರಾಜ್ಯಕ್ಕೆ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ಇದೇ ವೇಳೆ ಸಿಎಂ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, “ಯಾರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಬೇಕು ಅಥವಾ ಇಳಿಸಬೇಕು ಎಂಬುದು ನಮ್ಮ ಕೈಯಲ್ಲಿಲ್ಲ. ಒತ್ತಾಯ ಮಾಡುವವರು ಮಾಡುತ್ತಿರಲಿ, ಅದು ಅವರಿಗೆ ಬಿಟ್ಟ ವಿಚಾರ. ಆದರೆ ಮುಖ್ಯಮಂತ್ರಿ ಎಂದರೆ ಅದು ಐದು ವರ್ಷಗಳ ಅವಧಿಗೇ ಲೆಕ್ಕ. ಇಲ್ಲಿ ‘ಅರ್ಧ-ಗಿರ್ಧ’ ಎಂಬ ಮಾತೇ ಇಲ್ಲ. ನೂರು ದಿನ, ಇನ್ನೂರು ದಿನದ ಲೆಕ್ಕಾಚಾರಗಳು ಎಲ್ಲಿಯೂ ಇಲ್ಲ,” ಎಂದು ವದಂತಿಗಳಿಗೆ ತೆರೆ ಎಳೆದರು.

ಬಳ್ಳಾರಿಯಲ್ಲಿ ನಡೆದ ಫ್ಲೆಕ್ಸ್ ಗಲಾಟೆ ಕುರಿತು ಮಾತನಾಡಿದ ಅವರು, “ಹೆಚ್ಚಿನ ಜಾಗಗಳು ಪಿಡಬ್ಲ್ಯೂಡಿ ಇಲಾಖೆಗೆ ಸೇರಿರುತ್ತವೆ, ಅಂತಹ ಘಟನೆಗಳು ನಡೆಯಬಾರದಿತ್ತು,” ಎಂದು ವಿಷಾದಿಸಿದರು. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿ, “ಟಿಕೆಟ್ ಹಂಚಿಕೆ ಮಾಡುವುದು ಪಕ್ಷದ ವರಿಷ್ಠರ ನಿರ್ಧಾರ. ನಾವು ಕೇವಲ ಕೆಲಸ ಮಾಡುವವರು ಅಷ್ಟೇ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.

error: Content is protected !!