Friday, January 9, 2026

ಸಿದ್ದರಾಮಯ್ಯ ಸಿಎಂ ಕುರ್ಚಿ ಭದ್ರ; ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಜಮೀರ್

ಹೊಸದಿಗಂತ ದಾವಣಗೆರೆ:

ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ತೆರೆ ಎಳೆದಿದ್ದಾರೆ. ಬುಧವಾರ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಒಂದು ವೇಳೆ ಬದಲಾವಣೆಯ ಅಗತ್ಯವಿದ್ದರೆ ಅದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಅವರು ತಿಳಿಸಿದರು.

ಬಳ್ಳಾರಿಯಲ್ಲಿ ನಡೆದ ಗಲಭೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಘಟನೆಯನ್ನು ತಡೆಯುವಲ್ಲಿ ವಿಫಲರಾದ ಕಾರಣಕ್ಕೆ ಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು. “ಮಧ್ಯಾಹ್ನವೇ ಗಲಾಟೆ ಆರಂಭವಾದರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿರಲಿಲ್ಲ. ಶಾಸಕ ಭರತ್ ರೆಡ್ಡಿ ಸಂಜೆ ವೇಳೆಗೆ ಸ್ಥಳಕ್ಕೆ ಬರದೇ ಇದ್ದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು. ಅವರನ್ನು ಬಂಧಿಸಬೇಕು ಎಂಬ ಬಿಜೆಪಿಯ ಒತ್ತಾಯದಲ್ಲಿ ಯಾವುದೇ ಅರ್ಥವಿಲ್ಲ” ಎಂದು ಹೇಳಿದರು.

ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದನ್ನು ಟೀಕಿಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ಆಕ್ರೋಶ ವ್ಯಕ್ತಪಡಿಸಿದರು. “ನಿಮಗೆ ಬಡವರಿಗೆ ಕೊಡುವ ಮನಸ್ಸಿಲ್ಲ, ದೇವರು ಅಂತಹ ಗುಣವನ್ನೂ ನಿಮಗೆ ನೀಡಿಲ್ಲ. ನಾವು ನೀಡುತ್ತಿರುವ ಪರಿಹಾರದ ಬಗ್ಗೆ ಯಾಕೆ ಹೊಟ್ಟೆಕಿಚ್ಚು ಪಡುತ್ತೀರಿ? 50 ಕೋಟಿ ಕೊಟ್ಟರೂ ಹೋದ ಜೀವ ಮರಳಿ ಬರಲ್ಲ” ಎಂದು ತಿರುಗೇಟು ನೀಡಿದರು.

ರಾಜಶೇಖರ್ ಅವರ ಮರಣೋತ್ತರ ಪರೀಕ್ಷೆ ವಿಚಾರವಾಗಿ ಮಾತನಾಡಿದ ಸಚಿವರು, ಎರಡು ಬಾರಿ ಪೋಸ್ಟ್ ಮಾರ್ಟಮ್ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. “ಒಮ್ಮೆ ನಡೆದ ಮರಣೋತ್ತರ ಪರೀಕ್ಷೆಯನ್ನು ಪದೇ ಪದೇ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಸಿಎಂ ಹಾಗೂ ಸಚಿವರಾಗಿ ಕೆಲಸ ಮಾಡಿದ ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಈ ಕನಿಷ್ಠ ಜ್ಞಾನ ಇರಬೇಕು. ಈ ಪ್ರಕರಣದಲ್ಲಿ ಕೇವಲ ಒಂದು ಬಾರಿ ಮಾತ್ರ ಪೋಸ್ಟ್ ಮಾರ್ಟಮ್ ನಡೆದಿದೆ” ಎಂದು ಸ್ಪಷ್ಟಪಡಿಸಿದರು.

error: Content is protected !!