Friday, October 3, 2025

ಎಸ್‌ಐಟಿಯವರು ಹೊಡೆದ್ರಾ ಅಂತ ಕೇಳ್ತಿದ್ದಾರೆ… ಡ್ರಿಲ್, ಗ್ರಿಲ್ ಪದ ಪ್ರಯೋಗಕ್ಕೆ ಜಯಂತ್ ಆಕ್ಷೇಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಕಚೇರಿಗೆ ಆಗಮಿಸಿದ ಜಯಂತ್ ಟಿ., ಎಂಟನೇ ದಿನದ ಹಾಗೂ ಗಿರೀಶ್ ಮಟ್ಟೆಣ್ಣನವರ್ ಏಳನೇ ದಿನದ ವಿಚಾರಣೆಯಲ್ಲಿ ಹಾಜರಾಗಿದ್ದಾರೆ.

ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಜಯಂತ್, ‘ಎಸ್‌ಐಟಿ ಗ್ರಿಲ್‌’ ಪದ ಪ್ರಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ದಾಖಲೆ ಆಧಾರದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ತಡ ರಾತ್ರಿ ವರೆಗೂ ಗ್ರಿಲ್, ಡ್ರಿಲ್ ಎಂದು ಮಾಧ್ಯಮಗಳು ಬಿತ್ತರಿಸುತ್ತಿವೆ. ಇದರ ಪರಿಣಾಮ ತನಿಖೆ ಮುಗಿಸಿ ಹೊರಗೆ ಬರುವಾಗ ಜನ ಅಧಿಕಾರಿಗಳು ಹೊಡೆದಿದ್ದಾರಾ ಎಂದು ಕೇಳುವ ಸ್ಥಿತಿ ಇದೆ. ಮಾಧ್ಯಮದವರು ಸತ್ಯಾಂಶ ವರದಿ ಮಾಡಬೇಕು ಎಂದು ಹೇಳಿದ್ದಾರೆ.

ಎಸ್‌ಐಟಿ ಮುಂದೆ ಯಾವುದೇ ಸುಳ್ಳು ಹೇಳೋದಕ್ಕೆ ಆಗುವುದಿಲ್ಲ. ಯಾರು ತನಿಖೆಗೆ ಬಂದರೂ ಸಹ ಸತ್ಯವನ್ನೇ ಹೇಳಬೇಕಾಗುತ್ತದೆ. ನನ್ನ ಮೂರು ಮೊಬೈಲ್ ಅನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಈ ಪ್ರಕರಣ ಸಂಬಂಧಿಸಿದ ಏನಾದರೂ ಮಾಹಿತಿ, ಸಂದೇಶವಿದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ, ಇಲ್ಲವಾದರೆ ವಾಪಸ್ ಕೊಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.