ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತುಹಾಕಲಾಗಿದೆ ಎಂಬ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಇಲ್ಲಿನ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಬುಧವಾರ ಶೋಧ ನಡೆಸಿದ ಎಸ್‌ಐಟಿಗೆ ಮತ್ತಷ್ಟು ಮಾನವ ಕಳೆಬರಗಳು ಸಿಕ್ಕಿವೆ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಮಾಸ್ಕ್‌ಮ್ಯಾನ್ ಚಿನ್ನಯ್ಯ ತಂದಿದ್ದ ಮಾನವ ತಲೆಬುರುಡೆ ಮೂಲ ಶೋಧಕ್ಕೆ ಇಳಿದಿದ್ದ ಅಧಿಕಾರಿಗಳಿಗೆ ಇದು ಬಂಗ್ಲೆಗುಡ್ಡೆ ಪರಿಸರದ್ದು ಎಂಬುದು ಗೊತ್ತಾಗಿತ್ತು. ಇದರ ಬೆನ್ನಿಗೇ ಈ ಪರಿಸರದಿಂದ ತಲೆ ಬುರುಡೆ ತೆಗೆದುಕೊಟ್ಟಿದ್ದಾರೆ ಎನ್ನಲಾದ ಸೌಜನ್ಯಾಳ ಸಂಬಂಧಿ ವಿಠಲ ಗೌಡರೊಂದಿಗೆ ಅಧಿಕಾರಿಗಳು ಸ್ಥಳಮಹಜರು ನಡೆಸಿದ್ದರು. ಈ ವೇಳೆ ಅಲ್ಲಿ ಕೆಲವೊಂದು ಮೂಳೆಗಳು, ವಾಮಾಚಾರಕ್ಕೆ ಬಳಸುವ ಮಡಿಕೆ ಮೊದಲಾದ ಸೊತ್ತುಗಳು ಪತ್ತೆಯಾಗಿದ್ದವು ಎಂದು ಖುದ್ದು ವಿಠಲ ಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅದಾದ ಬಳಿಕ ಬಹಳಷ್ಟು ಕುತೂಹಲ ಕೆರಳಿಸಿದ್ದ ಬಂಗ್ಲೆಗುಡ್ಡೆ ಪರಿಸರವನ್ನು ವಿಠಲ ಗೌಡ ಮಾಹಿತಿಯಂತೆ ಜಾಲಾಡಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದು, ಬುಧವಾರ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಒಟ್ಟು ಐದು ಕಡೆಗಳಲ್ಲಿ ಮಾನವ ಕಳೆಬರಗಳು ಹಾಗೂ ಬಟ್ಟೆ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಎಸ್‌ಐಟಿ ಯಾವುದೇ ಮಾಹಿತಿ ನೀಡಿಲ್ಲವಾದರೂ ಕಾರ್ಯಾಚರಣೆ ವೇಳೆ ಬಹಳಷ್ಟು ವಸ್ತುಗಳನ್ನು ಅಧಿಕಾರಿಗಳು ತಮ್ಮೊಡನೆ ಕೊಂಡೊಯ್ದಿರುವುದು ಈ ಮಾಹಿತಿಗೆ ಪುಷ್ಟಿ ನೀಡಿದೆ.