ಹೊಸದಿಗಂತ ವರದಿ ಗದಗ:
ದಿನ ನಿತ್ಯ ಧರ್ಮಗಳ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಎಂಬ ಗುಲ್ಲೆಬ್ಬಿಸಿ ಪೊಲೀಸರ ಸರ್ಪಗಾವಲು ಮೂಲಕ ನೆಮ್ಮದಿಯಾಗಿ ಆಚರಿಸಲು ತಡೆ ನೀಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಮೂರ್ತಿಗೆ ಕಲ್ಲು ಎಸೆದ ಪ್ರಕರಣ ಸರಕಾರದ ಆಡಳಿತ ವೈಫಲ್ಯವಾಗಿದೆ. ಮುಸಲ್ಮಾನರು ಇಲ್ಲದ ಊರಲ್ಲಿ ಮೊಹರಂ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೋಮುಸೌಹಾರ್ದತೆ ಹಾಳು ಮಾಡುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಅಲಂಕಾರ ಮಾಡಬೇಡಿ ವಾದ್ಯಗಳನ್ನು ಹಚ್ಚಬೇಡಿ, ಅಲ್ಲಿ ಪ್ರತಿಷ್ಠಾಪಿಸಬೇಡಿ ಎಂಬ ನಿರ್ಬಂಧ ಹೇರುವ ದುರಹಂಕಾರಿ ಸರಕಾರ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳಾದರೂ ಒಂದೇ ಒಂದು ಅಭಿವೃದ್ಧಿ ಕೆಲಸವಾಗಿಲ್ಲ. ನೀರಾವರಿ, ರಸ್ತೆ ಸೇರಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗಿಲ್ಲ. ಬೆಲೆ ಏರಿಕೆ ಗಗನಕ್ಕೆ ಮದ್ಯ ಶೇ.400 ರಷ್ಟು ಹೆಚ್ಚಳ, ಮನೆ ನೀರು ಟ್ಯಾಕ್ಸ್ ಹೆಚ್ಚಳ ವಿದ್ಯುತ್ ದರ ಹೆಚ್ಚಳ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹಾಕುತ್ತಿದೆ ಎಂದು ಆರೋಪಿಸಿದರು.
ನಿತ್ಯವೂ ಜಾತಿ-ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವಾಗುತ್ತಿದೆ: ಕಾರಜೋಳ
