Space Mission | ಬಾಹ್ಯಾಕಾಶದಲ್ಲಿ ನಡೀತಿದೆ ‘ಸೂಟ್ ರೈಡ್’ ಪ್ರಯೋಗ! ಏನಿದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಹಲವು ಗಗನ ಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಐತಿಹಾಸಿಕ ಮಿಷನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಮೆರಿಕದ ಆಕ್ಸಿಯಮ್ ಸ್ಪೇಸ್ ನಡೆಸುತ್ತಿರುವ ‘ಆಕ್ಸ್-4’ (Ax-4) ಮಿಷನ್‌ನ ಭಾಗವಾಗಿ, 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.

ಈ ಪ್ರಯೋಗಗಳಲ್ಲಿ ಅತ್ಯಂತ ಪ್ರಮುಖವಾದದು ‘ಸೂಟ್ ರೈಡ್’ ಎಂಬ ಯೋಜನೆಯಾಗಿದ್ದು, ಇದು ಮಧುಮೇಹದ ನಿಯಂತ್ರಣ ಮತ್ತು ಜೀರ್ಣಕ್ರಿಯೆ ಕುರಿತ ಅಧ್ಯಯನವಾಗಿದೆ. ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯ ಸ್ಥಿತಿಯಲ್ಲಿ ಗ್ಲೂಕೋಸ್ ಚಯಾಪಚಯದಲ್ಲಿ ಆಗುವ ಬದಲಾವಣೆಗಳನ್ನು ವಿಶ್ಲೇಷಿಸುವ ಈ ಸಂಶೋಧನೆಯು ಭೂಮಿಯ ಮೇಲೆಯೂ ನವೀನ ಚಿಕಿತ್ಸಾ ಮಾರ್ಗಗಳನ್ನು ರೂಪಿಸಬಹುದು ಎಂಬ ನಿರೀಕ್ಷೆ ಇದೆ.

ಡಾ. ಮೊಹಮ್ಮದ್ ಫಿಟ್ಯಾನ್, ಬುರ್ಜೀಲ್ ಮೆಡಿಕಲ್ ಸಿಟಿಯ ಮುಖ್ಯ ವೈದ್ಯಾಧಿಕಾರಿ ಹಾಗೂ ಈ ಸಂಶೋಧನೆಯ ಕ್ಲಿನಿಕಲ್ ಲೀಡ್ ಆಗಿರುವವರು, “ಸೂಟ್ ರೈಡ್ ಯೋಜನೆಯಿಂದ ಬಾಹ್ಯಾಕಾಶ ಪರಿಸರವು ಗ್ಲೂಕೋಸ್ ಜೀರ್ಣಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದರಿಂದ ಮಧುಮೇಹ ಮತ್ತು ಇತರ ಚಯಾಪಚಯ ಸಂಬಂಧಿ ಕಾಯಿಲೆಗಳ ಬಗ್ಗೆ ಹೊಸ ಅರಿವಿಗೆ ನಾಂದಿ ಹಾಕಬಹುದು,” ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದಂತೆ ಬುರ್ಜೀಲ್ ಹೋಲ್ಡಿಂಗ್ಸ್ ಮತ್ತು ಆಕ್ಸಿಯಮ್ ಸ್ಪೇಸ್‌ ನಡುವೆ ಸಂಶೋಧನಾ ಸಹಭಾಗಿತ್ವವಿದೆ. ಬಾಹ್ಯಾಕಾಶದಲ್ಲಿ ನಿರಂತರ ಗ್ಲೂಕೋಸ್ ಮಾನಿಟರ್ (CGM) ಹಾಗೂ ಇನ್ಸುಲಿನ್ ನಿಯಂತ್ರಣ ಸಾಧನಗಳ ಪರಿಣಾಮಕಾರಿ ಬಳಕೆಯ ಕುರಿತು ಈ ಸಂಶೋಧನೆ ವರದಿ ನೀಡಲಿದೆ. ಈ ಸಾಧನಗಳು ಈಗಾಗಲೇ ಭೂಮಿಯ ಮೇಲಿನ ಮಧುಮೇಹ ನಿಯಂತ್ರಣದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿವೆ.

ಬಾಹ್ಯಾಕಾಶದಲ್ಲಿ ಇನ್ಸುಲಿನ್ ಅವಲಂಬಿತ ಮಧುಮೇಹಕ್ಕೆ ಪರಿಹಾರ ಕಂಡುಹಿಡಿಯಲು ಇದು ಪ್ರಮುಖ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ಮಧುಮೇಹ ಹೊಂದಿರುವ ಗಗನಯಾತ್ರಿಗಳು ಕೂಡ ಬಾಹ್ಯಾಕಾಶ ಮಿಷನ್‌ಗಳಲ್ಲಿ ಪಾಲ್ಗೊಳ್ಳಬಹುದಾದ ಸಾಧ್ಯತೆಯನ್ನು ಇದು ಪುಷ್ಟಿಪಡಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!