Wednesday, December 17, 2025

ಶ್ರೀಲಂಕಾ ಕ್ರಿಕೆಟ್ ದಿಗ್ಗಜನಿಗೆ ಬಂಧನ ಭೀತಿ: 1996ರ ವಿಶ್ವಕಪ್ ವಿಜೇತನಿಗೆ ಕಚ್ಚಾ ತೈಲ ಹಗರಣದ ಕಂಟಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

1996ರ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗಗೆ ಬಂಧನದ ಭೀತಿ: ಕಚ್ಚಾ ತೈಲ ಹಗರಣದಲ್ಲಿ ಭ್ರಷ್ಟಾಚಾರ ಸಾಬೀತು
ಶ್ರೀಲಂಕಾ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವ 1996ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಅವರಿಗೆ ಇದೀಗ ಬಂಧನದ ಭೀತಿ ಎದುರಾಗಿದೆ. 2017ರಲ್ಲಿ ಶ್ರೀಲಂಕಾ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ಕೈಗಾರಿಕಾ ಸಚಿವರಾಗಿದ್ದ ರಣತುಂಗ ಅವರು, ಕಚ್ಚಾ ತೈಲ ಖರೀದಿಯ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಲಂಕಾ ಸರ್ಕಾರ ಮುಂದಾಗಿದೆ.

ಸುಮಾರು ಎಂಟು ವರ್ಷಗಳ ಹಿಂದೆ ರಣತುಂಗ ಅವರು ಸಚಿವರಾಗಿದ್ದಾಗ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಚ್ಚಾ ತೈಲ ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಭ್ರಷ್ಟಾಚಾರ ತನಿಖಾ ಆಯೋಗದ ಪ್ರಕಾರ, ಈ ಹಗರಣದಿಂದಾಗಿ ಸಿಪಿಸಿಗೆ ಬರೋಬ್ಬರಿ 800 ಮಿಲಿಯನ್ ಶ್ರೀಲಂಕಾ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ.

ಈ ಭ್ರಷ್ಟಾಚಾರ ಆರೋಪದಲ್ಲಿ ಅರ್ಜುನ ರಣತುಂಗ ಅವರ ಹಿರಿಯ ಸಹೋದರ ದಮ್ಮಿಕಾ ರಣತುಂಗ ಕೂಡ ತಪ್ಪಿತಸ್ಥರೆಂದು ಸಾಬೀತಾಗಿದೆ. ಅರ್ಜುನ ರಣತುಂಗ ಸಚಿವರಾಗಿದ್ದ ಅವಧಿಯಲ್ಲಿ ದಮ್ಮಿಕಾ ಅವರು ಸಿಪಿಸಿಯ ಅಧ್ಯಕ್ಷರಾಗಿದ್ದರು. ಡಿಸೆಂಬರ್ 15ರಂದು, ಪೊಲೀಸರು ದಮ್ಮಿಕಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದಾಗ್ಯೂ, ನಂತರ ಅವರಿಗೆ ಜಾಮೀನು ನೀಡಲಾಗಿದೆ. ಅಮೆರಿಕ ಮತ್ತು ಶ್ರೀಲಂಕಾ ಎರಡೂ ದೇಶಗಳ ಪೌರತ್ವ ಹೊಂದಿರುವ ದಮ್ಮಿಕಾ ಅವರ ಪ್ರಯಾಣದ ಮೇಲೆ ಮ್ಯಾಜಿಸ್ಟ್ರೇಟ್ ತಾತ್ಕಾಲಿಕ ನಿಷೇಧ ಹೇರಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ಆಯೋಗವು ಕೊಲಂಬೊದ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಿದ್ದು, ಅರ್ಜುನ ರಣತುಂಗ ಅವರು ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ಮತ್ತು ಸದ್ಯಕ್ಕೆ ಅವರು ದೇಶದಿಂದ ಹೊರಗಿದ್ದಾರೆ. ಅವರು ಶ್ರೀಲಂಕಾಕ್ಕೆ ಹಿಂದಿರುಗಿದ ನಂತರವೇ ಅವರನ್ನು ಬಂಧಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಅರ್ಜುನ ರಣತುಂಗ ಮತ್ತು ಅವರ ಸಹೋದರನ ವಿರುದ್ಧದ ಈ ತನಿಖೆಯು ಪ್ರಸ್ತುತ ಸರ್ಕಾರದ ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳ ಫಲಿತಾಂಶವಾಗಿದೆ. 2024ರಲ್ಲಿ ಅನುರ ಕುಮಾರ ದಿಸಾನಾಯಕ ಅವರ ನೇತೃತ್ವದಲ್ಲಿ ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಕೊನೆಗೊಳಿಸುವುದಾಗಿ ದೇಶದ ಜನರಿಗೆ ಭರವಸೆ ನೀಡಿದ ಈ ಸರ್ಕಾರವು, ಇದೀಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿನ ಹಳೆಯ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯುವ ಕೆಲಸವನ್ನು ವೇಗಗೊಳಿಸಿದೆ.

error: Content is protected !!