Wednesday, December 10, 2025

ಕೊನೆಗೂ ಮೌನ ಮುರಿದ ಸ್ಟಾರ್ ಕ್ರಿಕೆಟರ್: ಈ ವಿಷಯವನ್ನು ಇಲ್ಲಿಯೇ ಬಿಟ್ಟುಬಿಡಿ ಎಂದ ಸ್ಮೃತಿ ಮಂಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ವೈಯಕ್ತಿಕ ಬದುಕು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಚರ್ಚೆಗೆ ಒಳಗಾಗಿತ್ತು. ವಿವಾಹ ಕುರಿತಂತೆ ಹರಿದಾಡುತ್ತಿದ್ದ ಅನೇಕ ಊಹಾಪೋಹಗಳಿಗೆ ಇದೀಗ ಸ್ವತಃ ಸ್ಮೃತಿ ಅಂತ್ಯ ಹಾಡಿದ್ದು, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಪಾಲಾಶ್ ಮುಚ್ಚಲ್ ಅವರ ಜೊತೆಗಿನ ಮದುವೆಯನ್ನು ರದ್ದುಗೊಳಿಸಿರುವುದನ್ನು ಅವರು ಅಧಿಕೃತವಾಗಿ ದೃಢಪಡಿಸಿದ್ದು, ಈ ವಿಷಯವನ್ನು ಇಲ್ಲಿಯೇ ಮುಕ್ತಾಯಗೊಳಿಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, ಕಳೆದ ಕೆಲವು ವಾರಗಳಿಂದ ತನ್ನ ಖಾಸಗಿ ಜೀವನದ ಬಗ್ಗೆ ಅವಶ್ಯಕತೆಯಿಲ್ಲದ ಮಾತುಗಳು ಚರ್ಚೆಗಳು ನಡೆಯುತ್ತಿವೆ, ನಾನು ತುಂಬಾ ಖಾಸಗಿ ವ್ಯಕ್ತಿ, ಮತ್ತು ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ. ಇಂತಹ ವಿಚಾರಗಳು ಸಾರ್ವಜನಿಕ ಚರ್ಚೆಗೆ ಬರಬಾರದು ಎಂಬುದು ತಮ್ಮ ಆಶಯ ಎಂದು ಅವರು ತಿಳಿಸಿದ್ದಾರೆ. ಆದರೆ ಗೊಂದಲಕ್ಕೆ ತೆರೆ ಎಳೆಯುವ ಸಲುವಾಗಿ ಮದುವೆ ರದ್ದು ಆಗಿರುವ ಸತ್ಯವನ್ನು ಸ್ಪಷ್ಟಪಡಿಸುವುದು ಅಗತ್ಯವಾಯಿತು ಎಂದು ಹೇಳಿದ್ದಾರೆ.

ಇದಲ್ಲದೆ, ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಬೇಕೆಂದು ಸ್ಮೃತಿ ಮನವಿ ಮಾಡಿಕೊಂಡಿದ್ದಾರೆ. ಯಾರೂ ಅನಗತ್ಯ ಊಹಾಪೋಹಗಳನ್ನು ಮುಂದುವರಿಸಬಾರದು ಎಂದು ಅವರು ಮನವರಿಕೆ ಮಾಡಿದ್ದಾರೆ. ತಮ್ಮ ಮುಂದಿನ ಗುರಿಯ ಕುರಿತು ಮಾತನಾಡಿರುವ ಸ್ಮೃತಿ, ತನ್ನ ಸಂಪೂರ್ಣ ಗಮನ ಭಾರತ ತಂಡವನ್ನು ಪ್ರತಿನಿಧಿಸುವುದರ ಮೇಲೆ ಇದೆ ಎಂದಿದ್ದಾರೆ. ದೇಶಕ್ಕಾಗಿ ಹೆಚ್ಚು ವರ್ಷ ಆಡಬೇಕು, ಟ್ರೋಫಿಗಳನ್ನು ಗೆಲ್ಲಬೇಕು ಎಂಬುದೇ ತಮ್ಮ ಏಕೈಕ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ.

error: Content is protected !!