ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕ್ರೀಡಾ ಸಂಸ್ಥೆಯಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚಿಸಿ ರಾಜ್ಯ ಸರಕಾರ ಅಧಿಕೃತ ಮಾನ್ಯತೆ ನೀಡಿದೆ. ಈ ಮೂಲಕ ಕರುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯದ ಅಧಿಕೃತ ಮಾನ್ಯತೆ ದೊರೆತಂತಾಗಿದೆ.
ರಾಜ್ಯ ಕಂಬಳ ಅಸೋಸಿಯೇಷನ್‍ಗೆ 3 ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಮಾನ್ಯತೆ ನೀಡಲಾಗಿದೆ. ಅಸೋಸಿಯೇಷನ್ ಪ್ರತಿವರ್ಷ ಜೂ.30ರೊಳಗೆ ಕಾರ್ಯಚಟುವಟಿಕೆಗಳ ಆಡಳಿತ ವರದಿ, ವಾರ್ಷಿಕ ವಹಿವಾಟುವಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡಾವಳಿ ಪ್ರತಿ, ಕ್ಯಾಲೆಂಡ್ ಆಫ್ ಇವೆಂಟ್, ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಷನ್ ನವೀಕರಿಸಿರುವ ಪ್ರತಿ ಒದಗಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಅಸೋಸಿಯೇಷನ್‍ಗೆ ನೀಡುವ ಅನುದಾನವು ಸರಕಾರ ಅನುಮೋದಿಸುವ ವಿಶೇಷ ಅನುದಾನ ಸಂಹಿತೆ ನಿಯಮಗಳಿಗೆ ಒಳಪಟ್ಟಿದೆ. ಅಸೋಸಿಯೇಷನ್ ಕ್ರೀಡಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಲ- ಕಾಲಕ್ಕೆ ಹೊರಡಿಸುವ ಷರತ್ತು, ನಿಯಮ, ಸೂಚನೆಗಳನ್ನು ಆದೇಶಗಳನ್ನು ಪಾಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
15ರಂದು ಬೆಂಗಳೂರಿನ ಸಭೆ: ಕಂಬಳ ಅಸೋಸಿಯೇಷನ್ ಅಧಿಕೃತವಾಗಿ ಘೋಷಣೆಯಾಗಿದ್ದು, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಅ.15ರಂದು ಮೊದಲ ಹಂತದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಕಂಬಳ ಅಸೋಸಿಯೇಷನ್‍ನ ಬೈಲಾದ ಕರಡು ಪ್ರತಿ ಅನುಮೋದನೆ ಸಿಗಲಿದೆ. ಇದು ಮಾತ್ರವಲ್ಲದೆ ಅಸೋಸಿಯೇಷನ್ ಜವಾಬ್ದಾರಿ, ಅನುದಾನ, ಪದಾಧಿಕಾರಿಗಳ ಕಾರ್ಯವ್ಯಾಪ್ತಿ, ಕಂಬಳ ಆಯೋಜನೆ ಹಾಗೂ ಇತರ ವಿಷಯಗಳ ಕುರಿತು ಸಮಿತಿ ಸಭೆಯಲ್ಲಿ ನಿರ್ಣಯವಾಗಲಿದೆ ಎಂದು ಕಂಬಳ ಸಮಿತಿ ಉಪಾಧ್ಯಕ್ಷ ನವೀನ್‍ಚಂದ್ರ ಆಳ್ವ ತಿರುವೈಲುಗುತ್ತು ತಿಳಿಸಿದ್ದಾರೆ.
ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್
ಗೌರವ ಸಲಹೆಗಾರರು: ಡಾ.ಜೀವಂಧರ್ ಬಲ್ಲಾಳ್ ಕಾಂತಾವರ, ಜೀವನ್‍ದಾಸ್ ಅಡ್ಯಂತಾಯ ಮಿಯಾರು, ಕೆ.ಗುಣಪಾಲ್ ಕಡಂಬ ಕಾರ್ಕಳ. ಅಧ್ಯಕ್ಷರು: ಬೆಳಪು ದೇವಿಪ್ರಸಾದ್ ಶೆಟ್ಟಿ ಉಡುಪಿ, ಉಪಾಧ್ಯಕ್ಷರು: ನವೀನ್‍ಚಂದ್ರ ಆಳ್ವತಿರುವೈಲುಗುತ್ತು ವಾಮಂಜೂರು, ಕಾರ್ಯದರ್ಶಿ: ವಿಜಯ ಕುಮಾರ್ ಕಂಗಿನಮನೆ ಕಾರ್ಕಳ, ಕಾರ್ಯಕಾರಿ ಸಮಿತಿ ಸದಸ್ಯರು: ಚಂದ್ರಹಾಸ್ ಅನಿಲ್ ಮೂಡುಬಿದಿರೆ, ಲೋಕೇಶ್ ಶೆಟ್ಟಿ ಮುಚ್ಚೂರು, ಭಾಸ್ಕರ್ ಕೋಟ್ಯಾನ್ ಕಾರ್ಕಳ. ಸಮಿತಿ ಸದಸ್ಯರು: ಸುಕುಮಾರ್ ಶೆಟ್ಟಿಕೊಂಡೆಟ್ಟು, ಪಿ.ಆರ್.ಶೆಟ್ಟಿ ಮಂಗಳೂರು, ರೋಹಿತ್ ಕುಮಾರ್ ಹೆಗ್ಡೆ ಎರ್ಮಾಳ್, ಶ್ರೀಕಾಂತ್ ಭಟ್ ಮಣಿಪಾಲ, ಶಾಂತಾರಾಮ ಶೆಟ್ಟಿ ಬಾರಕೂರು, ಚಂದ್ರಹಾಸ ಶೆಟ್ಟಿ ಪುತ್ತೂರು, ಪಿಯೂಸ್ ರೊಡ್ರಿಗಸ್ ಬಂಟ್ವಾಳ, ಉದಯಕುಮಾರ್ ಶೆಟ್ಟಿ ಕಾರ್ಕಳ, ಸುಧಾಕರ ಹೆಗ್ಡೆ ಹೆರಾಜೆ, ಅನಿಲ್ ಶೆಟ್ಟಿ ಜಪ್ಪಿನಮೊಗರು, ಪ್ರಶಾಂತ್ ಕಾಜವ ಬಂಟ್ವಾಳ, ಅರುಣ್ ಕುಮಾರ್ ಶೆಟ್ಟಿ ಬಜಪೆ ಆಯ್ಕೆಯಾಗಿದ್ದಾರೆ.