ಹೊಸದಿಗಂತ ವರದಿ, ಬಳ್ಳಾರಿ:
ಕಾನೂನು ಕೈಗೆತ್ತಿಕೊಂಡು ದೌರ್ಜನ್ಯ, ಗೂಂಡಾಗಿರಿ, ಗುಂಡಿನ ದಾಳಿ ನಡೆಸಿ, ಕೈ ಕಾರ್ಯಕರ್ತನ ಹತ್ಯೆಗೆ ಕಾರಣರಾದ ನಗರ ಶಾಸಕ ನಾರಾ ಭರತ್ ರೆಡ್ಡಿ, ಆಪ್ತ ಸತೀಶ್ ರೆಡ್ಡಿ ಹಾಗೂ ಅವರ ಸಹಚರರನ್ನು ಕೂಡಲೇ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾದೀತು ಎಂದು ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಅನಾವರಣ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಮಹರ್ಷಿ ವಾಲ್ಮೀಕಿಯವರ ನ್ನೂ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ ಸ್ಥಾಪನೆ, ಜಯಂತಿ ಆಚರಣೆ ಘೋಷಣೆ ಮಾಡಿದ್ದು, ಇದನ್ನು ಕಾಂಗ್ರೆಸ್ ಮರೆತಂತಿದೆ. ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ವೀರಾವೇಷದ ಮಾತುಗಳನ್ನು ನಾವು ಸದನದಲ್ಲಿ ಕೇಳಿದ್ದೇವೆ, ವಾಲ್ಮೀಕಿ ನಾಯಕ ಸಮಾಜಕ್ಕೆ ಶ್ರೀರಾಮುಲು, ಜನಾರ್ಧನರೆಡ್ಡಿ, ಯಡಿಯೂರಪ್ಪ ಅವರ ಕೊಡುಗೆ ಸಾಕಷ್ಟಿದೆ ಎಂದರು.
ಅಮಾಯಕ ಯುವಕ ಬಲಿಯಾಗಿದ್ದರಲ್ಲಿ ಮಾಜಿ ಸಚಿವರಾದ ಶ್ರೀರಾಮುಲು, ಶಾಸಕ ಜನಾರ್ಧನ್ ರೆಡ್ಡಿ, ಸೋಮಶೇಖರ್ ರೆಡ್ಡಿ ಅವರ ಪಾತ್ರ ಏನು ಇಲ್ಲ. ಹತ್ಯೆಯಾದ ಯುವಕ, ಶಾಸಕರ ಆಪ್ತ ಸತೀಶ್ ರೆಡ್ಡಿ ಗನ್ ಮ್ಯಾನ್, ಪಂಜಾಬ್ ಮೂಲದ ಗುರು ಚರಣ್ ಅವರ ಗನ್ ನಿಂದ ಗುಂಡು ಹಾರಿದ್ದು ಎಂದು ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಕೂಡಲೇ ಶಾಸಕ ಭರತ್ ರೆಡ್ಡಿ ಸಹಚರರನ್ನು ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಶ್ರೀರಾಮುಲು, ಗಂಗಾವತಿ ಶಾಸಕ ಜನಾರ್ಧನರೆಡ್ಡಿ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಮಾಜಿ ಸಂಸದ ಸಣ್ಣ ಫಕೀರಪ್ಪ, ಮಾಜಿ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ, ಸುರೇಶ್ ಬಾಬು ಇತರರಿದ್ದರು.

