ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಪೃಥ್ವಿರಾಜ್ ಚವಾಣ್ ಗೆ ಸನಾತನ ಸಂಸ್ಥೆಯ ಟ್ರಸ್ಟಿ ವೀರೇಂದ್ರ ಮರಾಠೆ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ನೊಟೀಸ್ ಜಾರಿ ಮಾಡಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಚವಾಣ್ ಅವರು ‘ಕೇಸರಿ ಭಯೋತ್ಪಾದನೆ’ಯ ಬದಲು ‘ಸನಾತನ ಭಯೋತ್ಪಾದನೆ’ ಎಂಬ ಪದ ಬಳಸಿದ್ದರು. ಈ ಹೇಳಿಕೆಯು ಸನಾತನ ಸಂಸ್ಥೆಯ ಖ್ಯಾತಿಗೆ ಧಕ್ಕೆ ತಂದಿದೆ ಮತ್ತು ಸಾವಿರಾರು ಭಕ್ತರ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ಸಂಸ್ಥೆಯ ಕಾನೂನು ಸಲಹೆಗಾರ ಮತ್ತು ಬಾಂಬೆ ಹೈಕೋರ್ಟ್‌ನ ವಕೀಲ ರಾಮದಾಸ್ ಕೇಸರ್ಕರ್ ಆರೋಪಿಸಿದ್ದಾರೆ.
ಚವಾಣ್ ಅವರು 15 ದಿನಗಳ ಒಳಗೆ ಲಿಖಿತವಾಗಿ ಬೇಷರತ್ತಾಗಿ ಕ್ಷಮೆಯಾಚಿಸಬೇಕು, ತಮ್ಮ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಅದೇ ಮಾಧ್ಯಮದಲ್ಲಿ ಅದೇ ಪ್ರಾಮುಖ್ಯತೆಯೊಂದಿಗೆ ಕ್ಷಮೆಯಾಚನೆ ಪ್ರಕಟಿಸಬೇಕು, ಭವಿಷ್ಯದಲ್ಲಿ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಿರಬೇಕು ಮತ್ತು ಕಾನೂನು ವೆಚ್ಚವಾಗಿ 10,000 ರೂ.ಗಳನ್ನು ಪಾವತಿಸಬೇಕು ಎಂದು ಕೋರಲಾಗಿದೆ. ಒಂದು ವೇಳೆ ಈ ಬೇಡಿಕೆಗಳನ್ನು ಪಾಲಿಸದಿದ್ದರೆ, ಚವಾಣ್ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಸನಾತನ ಸಂಸ್ಥೆ ಎಚ್ಚರಿಕೆ ನೀಡಿದೆ.