ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಜೆಆರ್ ನಗರದ ವಿಎಸ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ಓಂ ಶಕ್ತಿ ದೇವಿಯ ರಥೋತ್ಸವದ ವೇಳೆ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ನಾಲ್ಕೈದು ಮಂದಿ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಜನೆವರಿ 4ರಂದು ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ದೇವಿಯ ತೇರು ಎಳೆಯುವ ಸಂಭ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕಟ್ಟಡವೊಂದರ ಮೇಲಿಂದ ಕಿಡಿಗೇಡಿಗಳು ತೇರು ಹಾಗೂ ಮಾಲಾಧಾರಿಗಳ ಮೇಲೆ ಕಲ್ಲು ಎಸೆದಿದ್ದರು. ಈ ಘಟನೆಯಲ್ಲಿ ಮಗು, ಯುವತಿ ಹಾಗೂ ಓರ್ವ ಮಹಿಳೆಗೆ ಗಾಯಗಳಾಗಿದ್ದವು. ಕಲ್ಲು ಎಸೆದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ದಾಳಿಯಿಂದ ಆಕ್ರೋಶಗೊಂಡ ಓಂ ಶಕ್ತಿ ಮಾಲಾಧಾರಿಗಳು ಮತ್ತು ಭಕ್ತರು ಜೆಜೆಆರ್ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, “ಬಂಧಿತರು 15 ರಿಂದ 17 ವರ್ಷದೊಳಗಿನ ಬಾಲಕರಾಗಿದ್ದಾರೆ. ಇದು ಬಾಲಾಪರಾಧದ ವ್ಯಾಪ್ತಿಗೆ ಬರುವುದರಿಂದ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು” ಎಂದು ಮನವಿ ಮಾಡಿದ್ದಾರೆ.

