Friday, December 26, 2025

ಹಣದ ಆಸೆ ತೋರಿಸಿ ಪ್ರಾಣವನ್ನೇ ಕಿತ್ತ ಆ್ಯಪ್: ಬೆಟ್ಟಿಂಗ್ ಸುಳಿಗೆ ಸಿಲುಕಿ ವಿದ್ಯಾರ್ಥಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಗಳ ಮೋಹಕ ಜಾಲಕ್ಕೆ ಸಿಲುಕಿ ಯುವಕನೋರ್ವ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು, ಜೀವನದ ಮೇಲಿನ ಆಸೆ ಬಿಟ್ಟು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಕಂದುಕೂರ್ ಪ್ರದೇಶದ ನಿವಾಸಿಯಾದ 18 ವರ್ಷದ ವಿಕ್ರಮ್ ಎಂಬ ವಿದ್ಯಾರ್ಥಿ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳಲ್ಲಿ ಹಣ ಹೂಡಿಕೆ ಮಾಡುವ ವ್ಯಸನಕ್ಕೆ ಬಿದ್ದಿದ್ದ ಎನ್ನಲಾಗಿದೆ. ಈ ಅಪಾಯಕಾರಿ ಆಟದಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದರಿಂದ ತೀವ್ರ ಮನನೊಂದಿದ್ದ ವಿಕ್ರಮ್, ಮನೆಯಲ್ಲೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕುಟುಂಬಸ್ಥರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಲು ಹೋರಾಡಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ವಿಕ್ರಮ್ ಕೊನೆಯುಸಿರೆಳೆದಿದ್ದಾನೆ. ಮಗನ ಅಕಾಲಿಕ ಮರಣದಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ಸಂಗಾರೆಡ್ಡಿ ಜಿಲ್ಲೆಯಲ್ಲಿ ಆನ್‌ಲೈನ್ ಬೆಟ್ಟಿಂಗ್‌ನಿಂದಾಗಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕೇವಲ ಒಂದು ವಾರದ ಅಂತರದಲ್ಲಿ ಇಬ್ಬರು ಯುವಕರು ಈ ಬೆಟ್ಟಿಂಗ್ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಪೋಷಕರಲ್ಲಿ ಅತೀವ ಆತಂಕ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

error: Content is protected !!