ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿರುವ ‘ಸು ಫ್ರಮ್ ಸೋ’ (Su From So) ಸಿನಿಮಾ ಈಗ ಒಟಿಟಿ ಅಂಗಳಕ್ಕೂ ಕಾಲಿಡುತ್ತಿದೆ. 44 ದಿನಗಳ ಕಾಲ ಹೌಸ್ ಫುಲ್ ಶೋಗಳನ್ನು ದಾಖಲಿಸಿಕೊಂಡು, 50 ನೇ ದಿನದತ್ತ ಹೆಜ್ಜೆ ಹಾಕುತ್ತಿರುವ ಈ ಸಿನಿಮಾ, ಸೆಪ್ಟೆಂಬರ್ 9ರಿಂದ ಜಿಯೋ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.
ಜೆ.ಪಿ. ತುಮಿನಾಡು ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ, ಅವರ ಚೊಚ್ಚಲ ನಿರ್ದೇಶನವಾಗಿದ್ದರೂ ಅದ್ಭುತ ಯಶಸ್ಸು ಪಡೆದಿದೆ. ಶನೀಲ್ ಗೌತಮ್, ಸಂಧ್ಯಾ ಅರಕೆರೆ, ರಾಜ್ ಬಿ. ಶೆಟ್ಟಿ ಮುಂತಾದ ಕಲಾವಿದರು ಅಭಿನಯಿಸಿರುವ ಈ ಹಾರರ್ ಕಾಮಿಡಿ ಕಥಾಹಂದರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕರಾವಳಿ ಭಾಗದ ಪ್ರತಿಭೆಗಳನ್ನು ರಾಜ್ಯದೆಲ್ಲೆಡೆ ಸ್ವಾಗತಿಸಲಾಗಿದ್ದು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಉತ್ತಮ ಕಮಾಯಿ ಮಾಡಿದೆ.
ವಿಶ್ವಾದ್ಯಂತ 121 ಕೋಟಿ ರೂ. ಕಲೆಕ್ಷನ್ ಮಾಡಿರುವ ಈ ಸಿನಿಮಾ ಕೇವಲ 5.5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು. ದೊಡ್ಡ ಪರದೆಯಲ್ಲಿ ನೋಡಿದ ಅಭಿಮಾನಿಗಳು, ಈಗ ಒಟಿಟಿ ಮೂಲಕ ಮತ್ತೊಮ್ಮೆ ಚಿತ್ರವನ್ನು ಅನುಭವಿಸಲು ಕಾಯುತ್ತಿದ್ದಾರೆ. ಜಿಯೋ ಹಾಟ್ ಸ್ಟಾರ್ ತನ್ನ ಅಪ್ಕಮಿಂಗ್ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರವನ್ನು ಸೇರಿಸಿದ್ದು, ಸೆಪ್ಟೆಂಬರ್ 9ನೇ ದಿನಾಂಕವನ್ನು ಖಚಿತಪಡಿಸಿದೆ.
ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ದೇಶಾದ್ಯಂತ ಇರುವ ಪ್ರೇಕ್ಷಕರಿಗೆ ಸಿನಿಮಾ ತಲುಪಲಿದ್ದು, ಇನ್ನಷ್ಟು ಮೆಚ್ಚುಗೆ ಗಳಿಸುವ ನಿರೀಕ್ಷೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ‘ಸು ಫ್ರಮ್ ಸೋ’ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಮಾಡುವ ಕಾರ್ಯವೂ ಮುಂದುವರಿದಿದೆ.