ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿ, ಜೆಪಿ ತುಮ್ಮಿನಾಡ್ ನಟಿಸಿರುವ ‘ಸು ಫ್ರಂ ಸೋ’ ಸಿನಿಮಾ ಒಂದೇ ದಿನದಲ್ಲಿ ಸೂಪರ್ ಹಿಟ್ ಆಗಿಬಿಟ್ಟಿದೆ. ಜನರು ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ .
ಹಾರರ್ ಕಾಮಿಡಿ ಸಿನಿಮಾ ಆಗಿರುವ ‘ಸು ಫ್ರಂ ಸೋ’ ಕರಾವಳಿ ಭಾಗದ ಕತೆ ಒಳಗೊಂಡಿದೆ. ಸಿನಿಮಾದ ಕತೆ, ಸಿನಿಮಾ ಒಳಗೊಂಡಿರುವ ನೇಟಿವಿಟಿಗಳು ಕೇರಳಕ್ಕೂ ಚೆನ್ನಾಗಿ ಒಪ್ಪುವ ಕಾರಣದಿಂದಾಗಿ ಇದೀಗ ಸಿನಿಮಾವನ್ನು ಮಲಯಾಳಂಗೆ ಡಬ್ ಮಾಡಿ ಕೇರಳದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ.
ಆಗಸ್ಟ್ 1 ರಂದು ‘ಸು ಫ್ರಂ ಸೋ’ ಸಿನಿಮಾ ಅದೇ ಹೆಸರಿನಲ್ಲಿ ಮಲಯಾಳಂನಲ್ಲೂ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ.
ದುಲ್ಕರ್ ಒಡೆತನದ ವೇಫರಾರ್ ಫಿಲಮ್ಸ್ ಸಂಸ್ಥೆಯು ‘ಸು ಫ್ರಂ ಸೋ’ ಸಿನಿಮಾ ಅನ್ನು ಕೇರಳ ರಾಜ್ಯದಾದ್ಯಂತ ವಿತರಣೆ ಮಾಡುತ್ತಿದೆ. ಸಿನಿಮಾದ ಪ್ರಚಾರವನ್ನು ರಾಜ್ ಬಿ ಶೆಟ್ಟಿ ಮತ್ತು ತಂಡ ಮಾಡಲಿದೆ.
‘ಸು ಫ್ರಂ ಸೋ’ ಸಿನಿಮಾದ ನಿರ್ಮಾಪಕ ರಾಜ್ ಬಿ ಶೆಟ್ಟಿ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಪರಿಚಿತ ಮುಖವೇ. ಮಲಯಾಳಂನ ಸ್ಟಾರ್ ನಟ ಮಮ್ಮುಟಿ ನಟನೆಯ ‘ಟರ್ಬೊ’ ಸಿನಿಮಾದ ವಿಲನ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದರು. ಅದಾದ ಬಳಿಕ ಮತ್ತೊಬ್ಬ ಸ್ಟಾರ್ ನಟಿ ಅಪರ್ಣಾ ಬಾಲಮುರಳಿ ಅವರೊಟ್ಟಿಗೆ ‘ರುಧಿರಂ’ ಮತ್ತು ಆಂಟೊನಿ ವರ್ಗಿಸ್ ಜೊತೆಗೆ ಕೊಂಡಲ್ ಸಿನಿಮಾನಲ್ಲಿಯೂ ನಟಿಸಿದ್ದಾರೆ. ಅವರ ನಿರ್ದೇಶನದ ‘ಟೋಬಿ’ ಸಿನಿಮಾ ಸಹ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು.
ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಪರಿಚಯ ಇರುವ ಕಾರಣದಿಂದಾಗಿ ರಾಜ್ ಬಿ ಶೆಟ್ಟಿ ತಮ್ಮ ನಿರ್ಮಾಣದ ಸಿನಿಮಾವನ್ನು ಕೇರಳದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.