Sunday, October 5, 2025

ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್: ಹಿಂದಿಯಲ್ಲಿ ಆಗುತ್ತಾ ರಿಮೇಕ್? ಏನಂತಾರೆ ಶೆಟ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದೆ. ಪರಭಾಷೆಯ ಮಂದಿ ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಅದರ ಜೊತೆ ಹಿಂದಿಯಲ್ಲಿ ರಿಮೇಕ್ ಮಾಡಲು ಆಫರ್ ಬಂದಿದೆ. ಆ ಬಗ್ಗೆ ರಾಜ್ ಬಿ. ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ನಡೆಸಿದ ಸಂದರ್ಶನದಲ್ಲಿ ರಾಜ್ ಬಿ. ಶೆಟ್ಟಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾಗೆ ಹಿಂದಿಯಿಂದ ರಿಮೇಕ್ ಆಫರ್ ಬಂದಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಸಿನಿಮಾ ಹೇಗೆ ಮೂಡಿಬರಬಹುದು ಎಂಬ ಕುತೂಹಲ ಕೂಡ ಅವರಿಗೆ ಇದೆ.

‘ಹಿಂದಿ ರಿಮೇಕ್ ಆಫರ್ ಬಂದಿದೆ. ಅವರು ಹೇಗೆ ಸಿನಿಮಾ ಮಾಡುತ್ತಾರೆ ಅಂತ ನನಗೆ ತುಂಬಾ ಕುತೂಹಲ ಇದೆ. ಇದು ಯಾವಾಗಲೂ ಕಲಿಕೆಯ ಪ್ರಕ್ರಿಯೆ. ಇದು ಒಂದು ಪ್ರದೇಶದಲ್ಲಿ ಬೇರೂರಿರುವ ಕಥೆ. ಅಂತಹ ಸಿನಿಮಾಗಳನ್ನೇ ನಾವು ಯಾವಾಗಲೂ ಮಾಡುವುದು. ನಾವು ಬದುಕಿರುವ ಜಗತ್ತು. ನಮಗೆ ಆ ಕಥೆ ಸುಂದರ ಎನಿಸಿತು. ಪ್ರೇಕ್ಷಕರಿಗೂ ಹಾಗೆಯೇ ಅನಿಸಿತು. ರಿಮೇಕ್ ಮಾಡುವವರಿಗೂ ಇದು ತುಂಬಾ ದೊಡ್ಡ ಕಲಿಕೆ ಆಗುತ್ತದೆ ಎಂದು ರಾಜ್ ಬಿ. ಶೆಟ್ಟಿ ಎಂದಿದ್ದಾರೆ.

ನಾವು ಸಿನಿಮಾ ಮಾಡುತ್ತೇವೆ. ಆದರೆ ನಮಗೂ ಕೂಡ ಆ ಸಿನಿಮಾದ ಜೀವಾಳ ಎಲ್ಲಿದೆ ಎಂಬುದು ತಿಳಿಯುವುದಿಲ್ಲ. ಸಿನಿಮಾ ಪೂರ್ಣಗೊಂಡ ಬಳಿಕ ಅದರಲ್ಲಿ ಜೀವಾಳ ಎಲ್ಲಿದೆ ಅಂತ ತಿಳಿಯುತ್ತೇವೆ. ಹಿಂದಿ ರಿಮೇಕ್​​ನಲ್ಲಿ ಅವರು ಅದನ್ನೇ ಬಳಸಿಕೊಳ್ಳುತ್ತಾರಾ ಅಥವಾ ಬೇರೆ ಏನನ್ನಾದರೂ ಸೇರಿಸುತ್ತಾರಾ ಎಂಬ ಕೌತುಕ ನನಗೆ ಇದೆ ಎಂದು ರಾಜ್​ ಬಿ. ಶೆಟ್ಟಿ ಹೇಳಿದ್ದಾರೆ.