ಹೊಸ ದಿಗಂತ ವರದಿ, ಮಡಿಕೇರಿ:
ಅನನ್ಯಾ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುಜಾತಾ ಭಟ್ ನೀಡಿದ ಸುಳ್ಳು ದೂರಿನ ವಿಚಾರವಾಗಿ ವಸಂತಿ ಎಂ.ಪಿ. ಅವರ ಸೋದರ ವಿಜಯ್ ಅವರು ಗುರುವಾರ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಹಾಜರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಕಚೇರಿಯಿಂದ ವಿಜಯ್ ಅವರಿಗೆ ನೋಟಿಸ್ ನೀಡಲಾಗಿತ್ತು. ಸುಜಾತಾ ಭಟ್ ಅವರು, ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಸ್ನೇಹಿತೆಯರ ಜತೆ ಬಂದು ಕಾಣೆಯಾಗಿದ್ದಳು. ಅವಳ ಬಗ್ಗೆ ಧರ್ಮಸ್ಥಳದಲ್ಲಿ ವಿಚಾರಿಸಿದಾಗ ದೂರು ಪಡೆದಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.
ಅದಾದ ಬಳಿಕ ವಿಜಯ್ ಅವರ ಸಹೋದರಿ ಎಂ.ಪಿ. ವಸಂತಿ ಅವರ ಭಾವಚಿತ್ರವನ್ನು ತೋರಿಸಿ, ಈಕೆ ತನ್ನ ಮಗಳು ಅನನ್ಯಾ ಭಟ್ ಎಂದು ಸುಜಾತ ಭಟ್ ವಾದಿಸಿದ್ದರು. ವಿಚಾರಣೆಯ ಬಳಿಕ ಆಕೆ ಹೇಳಿದ್ದೆಲ್ಲವೂ ಸುಳ್ಳು. ವಸಂತಿ ಸಾವಿಗೀಡಾಗಿ 18 ವರ್ಷಗಳೇ ಕಳೆದಿದೆ. ವಸಂತಿ ಅವರ ಮಾವ ರಂಗಪ್ರಸಾದ್ ಅವರ ಮನೆಯಲ್ಲಿ ಕೇರ್ ಟೇಕರ್ ಆಗಿದ್ದ ಸುಜಾತ ಭಟ್ ತನ್ನ ತಂಗಿ ವಸಂತಿಯ ಭಾವಚಿತ್ರವನ್ನು ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ವಸಂತಿ ಅವರ ಸೋದರ ವಿಜಯ್ ಅವರು ಎಸ್ಐಟಿಗೆ ಹೇಳಿಕೆ ನೀಡಿದ್ದಾರೆನ್ನಲಾಗಿದ್ದು, ಇದರೊಂದಿಗೆ ವಾಸಂತಿ ಮೃತಪಟ್ಟಿರುವುದಕ್ಕೆ ಸಂಬಂಧಿಸಿದ ಮರಣ ಪ್ರಮಾಣ ಪತ್ರವನ್ನು ಎಸ್ಐಟಿಗೆ ನೀಡಿದ್ದಾರೆ.