ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಬದರೀನಾಥ ದೇಗುಲಕ್ಕೆ ಖ್ಯಾತ ನಟ ರಜನಿಕಾಂತ್ ಅಕ್ಟೋಬರ್ 6 ರಂದು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಚಳಿಗಾಲದ ಹಿನ್ನೆಲೆಯಲ್ಲಿ ದೇಗುಲದ ಬಾಗಿಲುಗಳನ್ನು ಇನ್ನು ಕೆಲವೇ ದಿನಗಳಲ್ಲಿ ಮುಚ್ಚಲಿರುವುದರಿಂದ, ಅದಕ್ಕೂ ಮುನ್ನವೇ ನಟ ದರ್ಶನ ಪಡೆದಿದ್ದಾರೆ.
ದೇಗುಲಕ್ಕೆ ಆಗಮಿಸಿದ ರಜನಿಕಾಂತ್ ಅವರನ್ನು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು ಆದರದಿಂದ ಬರಮಾಡಿಕೊಂಡರು. ಅವರಿಗೆ ತುಳಸಿ ಮಾಲೆ ಹಾಗೂ ದೇವರ ಪ್ರಸಾದವನ್ನು ನೀಡಲಾಯಿತು. ಯಾತ್ರಾ ಮಾರ್ಗದಲ್ಲಿ ಬೆಚ್ಚಗಿನ ಉಡುಪು ಧರಿಸಿ ಸಾಗುತ್ತಿರುವ ರಜನಿಕಾಂತ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುತ್ತಿವೆ.
ಇದಕ್ಕೂ ಮುನ್ನ ಅಕ್ಟೋಬರ್ 4ರಂದು ರಜನಿಕಾಂತ್ ಅವರು ಋಷಿಕೇಶದ ಗಂಗಾ ನದಿಯ ದಡದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಧಾರ್ಮಿಕ ತಾಣಗಳಲ್ಲಿ ಅವರ ಈ ಭೇಟಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.