Thursday, September 25, 2025

ವಯಸ್ಸಾದ ಪೋಷಕರನ್ನು ಮನೆಯಿಂದ ಹೊರಹಾಕುವ ಮಕ್ಕಳಿಗೆ ಎಚ್ಚರಿಕೆಯ ತೀರ್ಪು ನೀಡಿದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂ ಕೋರ್ಟ್ ವಯಸ್ಸಾದ ಪೋಷಕರ ರಕ್ಷಣೆಗೆ ಒತ್ತು ನೀಡುವ ಮಹತ್ವ ತೀರ್ಪು ನೀಡಿದೆ.

ವಯಸ್ಸಾದ ಪೋಷಕರನ್ನುನೋಡಿಕೊಳ್ಳದ ವಯಸ್ಕ ಮಕ್ಕಳನ್ನು ಅವರ ಆಸ್ತಿಯಿಂದ ಹೊರಹಾಕಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 2007ರ ವೃದ್ಧ ಪೋಷಕರ ಯೋಗಕ್ಷೇಮ ಕಾಯಿದೆಯಡಿ, ಮಕ್ಕಳು ತಮ್ಮ ಕರ್ತವ್ಯವನ್ನು ಮರೆತರೆ, ಟ್ರಿಬ್ಯೂನಲ್‌ಗೆ ಹೊರಹಾಕುವ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ.

80 ವರ್ಷದ ವೃದ್ಧ ಮತ್ತು ಅವರ 78 ವರ್ಷದ ಪತ್ನಿ ತಮ್ಮ ಹಿರಿಯ ಮಗನನ್ನು ಆಸ್ತಿಯಿಂದ ಹೊರಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಾಂಬೆ ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ, ಹೈಕೋರ್ಟ್ ತೀರ್ಪನ್ನು ತಪ್ಪು ಎಂದು ರದ್ದುಗೊಳಿಸಿದರು.

ಮುಂಬೈನ ಎರಡು ಆಸ್ತಿಗಳನ್ನು ದಂಪತಿಯ ಮಗ ವಶಕ್ಕೆ ಪಡೆದಿದ್ದ. ಪೋಷಕರು ಉತ್ತರ ಪ್ರದೇಶಕ್ಕೆ ತೆರಳಿದ ನಂತರ, ಮಗ ಅವರಿಗೆ ಆಸ್ತಿಯಲ್ಲಿ ವಾಸಿಸಲು ಅವಕಾಶ ನೀಡಲಿಲ್ಲ. ಇದು ಕಾಯಿದೆಯ ಕರ್ತವ್ಯ ಉಲ್ಲಂಘನೆ ಎಂದು ಕೋರ್ಟ್ ಗುರುತಿಸಿತು. ಜೂನ್ 2025ರಲ್ಲಿ ಟ್ರಿಬ್ಯೂನಲ್, ಮಗನಿಗೆ ತಿಂಗಳಿಗೆ 3,000 ರೂ.ಗಳ ಜೀವನಾಂಶವನ್ನು ಪಾವತಿಸಲು ಮತ್ತು ಆಸ್ತಿಯನ್ನು ಖಾಲಿ ಮಾಡಲು ಆದೇಶಿಸಿತು.

ಸುಪ್ರೀಂ ಕೋರ್ಟ್, ಮಗ 59 ವರ್ಷದವನಾಗಿದ್ದರಿಂದ ವೃದ್ಧರ ಕಾಯಿದೆಯಡಿ ವೃದ್ಧನೆಂದು ಪರಿಗಣಿಸಲಾಗದು ಎಂದಿತು. ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ, ಮಗನಿಗೆ ನವೆಂಬರ್ 30ರ ಮೊದಲು ಆಸ್ತಿ ಖಾಲಿ ಮಾಡುವ ಭರವಸೆ ನೀಡಲು ಎರಡು ವಾರಗಳ ಕಾಲಾವಕಾಶ ನೀಡಿತು.

ಇದನ್ನೂ ಓದಿ