ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಣಕಾಸು ವರ್ಷದಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಶೇ. 16ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ. ಹವಾಮಾನದ ಅನುಕೂಲ, ಉತ್ತಮ ಮಳೆ ಮತ್ತು ಅಧಿಕ ಇಳುವರಿಯ ಹಿನ್ನೆಲೆಯಲ್ಲಿ ಈ ಬಾರಿ ಒಟ್ಟು 343.5 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ (2024-25) 296.1 ಲಕ್ಷ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗಿತ್ತು.
ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘಟನೆಯಾದ ಈ ವಾರ ತನ್ನ ಮೊದಲ ಮುಂಗಡ ಅಂದಾಜು ವರದಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್‌ನಲ್ಲಿ ತೆಗೆಯಲಾದ ಕಬ್ಬು ಬೆಳೆಗಳ ಉಪಗ್ರಹ ಚಿತ್ರಗಳು ಮತ್ತು ಕ್ಷೇತ್ರ ವರದಿಗಳನ್ನು ಪರಿಶೀಲಿಸಿ ಈ ಅಂದಾಜು ಮಾಡಲಾಗಿದೆ.
ಐಎಸ್‌ಎಂಎ ಪ್ರಕಾರ, ಉತ್ತಮವಾಗಿ ಹರಡಿರುವ ಮುಂಗಾರು ಮಳೆ, ಜಲಾಶಯಗಳಲ್ಲಿ ಉತ್ತಮ ನೀರು ಸಂಗ್ರಹ ಮತ್ತು ಕಬ್ಬು ಅಭಿವೃದ್ಧಿ ಯೋಜನೆಗಳ ಪರಿಣಾಮವಾಗಿ ಕಬ್ಬು ಬೆಳೆ ಅತ್ಯುತ್ತಮ ಸ್ಥಿತಿಯಲ್ಲಿದೆ.
ಹೆಚ್ಚುತ್ತಿರುವ ಉತ್ಪಾದನೆ: ರಫ್ತಿಗೆ ಸರ್ಕಾರದಿಂದ ಅನುಮತಿ
ಸಕ್ಕರೆ ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉದ್ಯಮಕ್ಕೆ ಉತ್ತೇಜನ ನೀಡಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
15 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗಿದೆ.
ಕಾಕಂಬಿಗಳ ಮೇಲಿದ್ದ ಶೇ. 50ರಷ್ಟು ಸುಂಕವನ್ನು ತೆಗೆದುಹಾಕಲಾಗಿದೆ.
ಈ ಕ್ರಮಗಳಿಂದ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಪುಷ್ಟಿ ಸಿಗುವ ನಿರೀಕ್ಷೆ ಇದೆ.
ಕಳೆದ ವರ್ಷ 57.11 ಲಕ್ಷ ಹೆಕ್ಟೇರ್‌ಗಳಲ್ಲಿ ಕಬ್ಬು ಬೆಳೆಯಲಾಗಿದ್ದರೆ, ಈ ವರ್ಷ ಅದು 57.35 ಲಕ್ಷ ಹೆಕ್ಟೇರ್‌ಗಳಿಗೆ ಏರಿದೆ. ಇದು ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಸೂಚಿಸುತ್ತದೆ.
ಪ್ರಮುಖ ರಾಜ್ಯಗಳಲ್ಲಿ ಉತ್ಪಾದನಾ ನಿರೀಕ್ಷೆ
ಜಾಗತಿಕ ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತವೇ ಎರಡನೇ ಸ್ಥಾನದಲ್ಲಿದೆ. ದೇಶೀಯವಾಗಿ, ಮಹಾರಾಷ್ಟ್ರವು ಅತಿಹೆಚ್ಚು ಕಬ್ಬು ಬೆಳೆಯುವ ರಾಜ್ಯವಾಗಿ ಮುಂದುವರೆದಿದೆ ಮತ್ತು ಈ ವರ್ಷ ಅತೀ ಹೆಚ್ಚಿನ ಹೆಚ್ಚಳ ನಿರೀಕ್ಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ 130 ಲಕ್ಷ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಉತ್ತರಪ್ರದೇಶದಲ್ಲಿ 22.57 ಲಕ್ಷ ಹೆಕ್ಟೇರ್ ಜಾಗದಲ್ಲಿ 103.2 ಲಕ್ಷ ಟನ್ ಉತ್ಪಾದನೆಯಾಗಬಹುದು. ಕರ್ನಾಟಕದಲ್ಲಿ 6.8 ಲಕ್ಷ ಹೆಕ್ಟೇರ್ ಜಾಗದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಈ ಬಾರಿ 63.5 ಲಕ್ಷ ಟನ್ ಸಕ್ಕರೆ ಉತ್ಪಾದಿಸಬಹುದು ಎಂದು ಐಎಸ್‌ಎಂಎ ಅಂದಾಜು ಮಾಡಿದೆ.

