Tuesday, September 9, 2025

ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತದಲ್ಲಿದೆ: ಪ್ರತಾಪ್ ಸಿಂಹ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಟೀಕಿಸಿದ್ದು, “ಇದು ತಾಲಿಬಾನ್ ಸರ್ಕಾರದಂತಾಗಿದೆ. ಅದರಿಂದಲೇ ಕೆಲವರು ಬಾಲ ಬಿಚ್ಚಿ ಕಲ್ಲು ಬೀಸುತ್ತಿದ್ದಾರೆ. ಇವರು ಸಿದ್ದರಾಮಯ್ಯನವರ ಪ್ರಕಾರ ಶಾಂತಿ ಪ್ರಿಯರು ಎಂದಂತೆ ನೋಡಿ” ಎಂದು ವಾಗ್ದಾಳಿ ನಡೆಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ನಡೆದ ಪ್ರತಿಭಟನಾ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರತಾಪ್ ಸಿಂಹ, ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಗಲಭೆಯಲ್ಲಿ ಭಾಗಿಯಾದವರ ಮೇಲಿನ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿದರು. “ಇದು ತಾಲಿಬಾನ್ ಸರ್ಕಾರದ ಕೆಲಸ. ರಾಜ್ಯದ ಗೃಹಸಚಿವರು ಇದೇ ರೀತಿಯ ನಿಲುವು ತಾಳಿದ್ದಾರೆ. ಹಿಂದೆ ನಾಗಮಂಗಲ ಗಲಭೆ ನಡೆದಾಗ ಗೃಹಸಚಿವರು ಸ್ಥಳಕ್ಕೆ ಬರದೇ, ಅದನ್ನು ಸಣ್ಣ ಘಟನೆ ಎಂದು ತಳ್ಳಿಹಾಕಿದ್ದರು” ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಅವರು, “ಈ ಹೋರಾಟಕ್ಕೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬರುತ್ತಾರೆ. ಹಿಂದು ಹುಲಿ ಬಸವರಾಜ ಪಾಟೀಲ್ ಯತ್ನಾಳ್ ಅವರನ್ನು ಸಹ ಕರೆಸಿಕೊಳ್ಳೋಣ. ಹಿಂದೆ ಶ್ರೀಚಾಮುಂಡೇಶ್ವರಿಗೆ ಅವಮಾನ ಮಾಡುವ ಉದ್ದೇಶದಿಂದ ಮಹಿಷಿ ದಸರಾ ಮಾಡಲು ಯತ್ನಿಸಿದ್ರು, ಆದರೆ ಅದನ್ನು ನಾವು ತಡೆಯಲು ಯಶಸ್ವಿಯಾದ್ವಿ. ಈಗಲೂ ಹಿಂದುಗಳ ರಕ್ಷಣೆಗೆ ನಾವು ಬಂದಿದ್ದೇವೆ” ಎಂದರು.

ಪ್ರತಾಪ್ ಸಿಂಹ, ಶಾಸಕರಾದ ಕದಲೂರು ಉದಯ್ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. “ಬಿಜೆಪಿ-ಜೆಡಿಎಸ್ ನಾಯಕರನ್ನು ಬಿಟ್ಟು ಜೂಜಾಟ ಮಾಡುವ ವ್ಯಕ್ತಿಯನ್ನು ಇಲ್ಲಿ ಗೆಲ್ಲಿಸಿದ್ದೀರಿ. ಅವರ ಕುಮ್ಮಕ್ಕಿನಿಂದ ಕೆಲವರು ಈಗ ಬಾಲ ಬಿಚ್ಚಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ