ಹೊಸದಿಗಂತ ಡಿಜಿಟಲ್ ಡೆಸ್ಕ್
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಮಾಡಿರುವ ರಾಜ್ಯದ 31 ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆ 16 ಕೋಟಿ 29 ಲಕ್ಷ ರೂಪಾಯಿ ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.
ಈ ಜಿಲ್ಲೆಯಲ್ಲಿ 157 ಗ್ರಾಮ ಪಂಚಾಯಿತಿಗಳಿದ್ದು, 2025 ರ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ತೆರಿಗೆ ಸಂಗ್ರಹ ಗುರಿ ಸಾಧನೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಈ ತೆರಿಗೆ ಸಂಗ್ರಹ ಸಹಕಾರಿಯಾಗಿದೆ. ತೆರಿಗೆ ಸಂಗ್ರಹದಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳು ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ. 28 ಜಿಲ್ಲೆಗಳು ಶೇಕಡ 50 ಕ್ಕಿಂತಲೂ ಕಡಿಮೆ ತೆರಿಗೆ ಸಂಗ್ರಹ ಮಾಡಿವೆ. ತೆರಿಗೆ ಪಾವತಿಯ ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಸುಲಭಗೊಳಿಸುವ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ನವೀನ್ ಭಟ್ ತಿಳಿಸಿದ್ದಾರೆ.