ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಕಲ್ಯಾಣ್ ನಟನೆಯ ಮತ್ತೊಂದು ಸಿನಿಮಾ ‘ಓಜಿ’ ಬಿಡುಗಡೆ ಆಗುತ್ತಿದೆ.
ಆಂಧ್ರ ವಿಧಾನಸಭೆ ಚುನಾವಣೆಗೆ ಧುಮುಕುವ ಮೊದಲು ‘ಓಜಿ’ ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ಆದರೆ ಚುನಾವಣೆಯಲ್ಲಿ ಬ್ಯುಸಿ ಆದ ಕಾರಣ ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು ಪವನ್ ಅವರು ಸಿನಿಮಾ ಮುಗಿಸಿಕೊಟ್ಟಿದ್ದಾರೆ. ‘ಓಜಿ’ ಸಿನಿಮಾ ಮುಂದಿನ ಗುರುವಾರ (ಸೆಪ್ಟೆಂಬರ್ 25) ಬಿಡುಗಡೆ ಆಗಲಿದೆ.
ಆದ್ರೆ ದೊಡ್ಡ ಸಿನಿಮಾಗಳು ಬಿಡುಗಡೆ ಆಗುವ ಮೊದಲು ಸಿನಿಮಾಗಳ ಹೆಚ್ಚುವರಿ ಶೋಗಳಿಗೆ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಗಳಿಂದ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಪವನ್ ಕಲ್ಯಾಣ್ ನಟನೆಯ ಈ ಹಿಂದಿನ ಸಿನಿಮಾ ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೂ ಟಿಕೆಟ್ ದರ ಹೆಚ್ಚಿಸಲು ಮತ್ತು ಶೋಗಳ ಸಂಖ್ಯೆ ಹೆಚ್ಚಿಸಲು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳಿಂದ ಅನುಮತಿ ಪಡೆಯಲಾಗಿತ್ತು.
ಈ ಬಾರಿಯೂ ಸಹ ‘ಓಜಿ’ ಸಿನಿಮಾದ ಹೆಚ್ಚುವರಿ ಶೋ ಮತ್ತು ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಕೋರಲಾಗಿತ್ತು. ಆಂಧ್ರ ಸರ್ಕಾರ ನಿರೀಕ್ಷೆಯಂತೆಯೇ ಅನುಮತಿ ನೀಡಿದೆ. ಆದರೆ ನೆರೆಯ ತೆಲಂಗಾಣ ಸರ್ಕಾರ, ‘ಓಜಿ’ ಸಿನಿಮಾದ ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಿಸಿದೆ. ಆದರೆ ಸಿನಿಮಾ ಬಿಡುಗಡೆಯಾದ ಮೊದಲ ನಾಲ್ಕು ದಿನ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಆಂಧ್ರ ಪ್ರದೇಶದಲ್ಲಿ ‘ಓಜಿ’ ಸಿನಿಮಾದ ಶೋಗಳು ಮಧ್ಯರಾತ್ರಿ 1 ಗಂಟೆಯಿಂದಲೇ ಪ್ರಾರಂಭ ಆಗಲಿವೆ. ಆದರೆ ತೆಲಂಗಾಣದಲ್ಲಿ ರಾತ್ರಿ 1 ಗಂಟೆ ಶೋಗಳಿಗೆ ಅನುಮತಿ ನೀಡಲಾಗಿಲ್ಲ. ‘ಪುಷ್ಪ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಆದ ಅವಘಡದ ಬಳಿಕ ಮಧ್ಯರಾತ್ರಿ ಶೋಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದೆ.
ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಅನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಡಿವಿವಿ ದಯಾನಂದ. ಬಾಲಿವುಡ್ ಸ್ಟಾರ್ ನಟ ಇಮ್ರಾನ್ ಹಾಶ್ಮಿ ಈ ಸಿನಿಮಾದ ವಿಲನ್. ಪ್ರಿಯಾಂಕಾ ಮೋಹನ್ ನಾಯಕಿ.