ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಸಮಶೀತೋಷ್ಣ ವಾತಾವರಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಇದೀಗ ಅಪರೂಪದ ಚಳಿ ಅನುಭವವಾಗುವ ಸಾಧ್ಯತೆ ಕಂಡುಬಂದಿದೆ. ಮುಂದಿನ ಕೆಲವು ದಿನಗಳಲ್ಲಿ ತಾಪಮಾನದಲ್ಲಿ ತೀವ್ರ ಇಳಿಕೆ ಆಗಲಿದ್ದು, ಕಾರವಾರ ಸೇರಿದಂತೆ ಕರಾವಳಿ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಚಳಿ ಅಲೆ ಪರಿಣಾಮ ಬೀರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಬಿಡುಗಡೆ ಮಾಡಿದ ಮಾಹಿತಿಯಂತೆ, ಡಿಸೆಂಬರ್ 20 ಮತ್ತು 21ರಂದು ಈ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಳಗಿನ ಜಾವ ಮತ್ತು ರಾತ್ರಿ ವೇಳೆಯಲ್ಲಿ ಚಳಿ ಹೆಚ್ಚಾಗಿ ಅನುಭವವಾಗಲಿದೆ. ಇದೇ ಅವಧಿಯಲ್ಲಿ ಒಳನಾಡು ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ತಾಪಮಾನವು 4 ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ನಿರೀಕ್ಷೆ ವ್ಯಕ್ತವಾಗಿದೆ.
ಹವಾಮಾನ ತಜ್ಞರ ಪ್ರಕಾರ, ಉತ್ತರದಿಂದ ಬೀಸುವ ಶೀತಗಾಳಿಯ ಪ್ರಭಾವದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪರಿಣಾಮ ಡಿಸೆಂಬರ್ 22ರವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

