Saturday, September 20, 2025

ಭೀಕರ ಅಪಘಾತ: ಪೊಲೀಸ್​ ಕಾನ್ಸ್ಟೇಬಲ್​​​ ಸೇರಿ ಮೂವರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಾನ್ಸ್​ಟೇಬಲ್​ಗಳು ಸೇರಿದಂತೆ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಗದಗ ತಾಲೂಕಿನ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.

ಕಾರಿನಲ್ಲಿದ್ದ ಪೊಲೀಸ್​ ಕಾನ್ಸ್ಟೇಬಲ್ ಗಳಾದ ಅರ್ಜುನ್ ನೆಲ್ಲೂರ(29) ಮತ್ತು ವೀರೇಶ್ ಉಪ್ಪಾರ(31) ಸೇರಿ ಅರ್ಜುನ್ ಚಿಕ್ಕಪ್ಪ ರವಿ ನೆಲ್ಲೂರ(43) ಮೃತರಾಗಿದ್ದಾರೆ.

ಅರ್ಜುನ್ ನೆಲ್ಲೂರ, ವೀರೇಶ್ ಉಪ್ಪಾರ ಮತ್ತು ರವಿ ನೆಲ್ಲೂರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾಗಿ‌ ಬಳಿಕ ಬಸ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಕಾರಿನ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿವೆ.

ಘಟನೆಯಲ್ಲಿ ಮೃತಪಟ್ಟ ಮೂವರ ಪೈಕಿ ಇಬ್ಬರು ಕಾನ್ಸ್​ಟೇಬಲ್​ಗಳ ವಿವಾಹ ನಿಶ್ಚಯವಾಗಿತ್ತು. ಅರ್ಜುನ ನೆಲ್ಲೂರ ಮತ್ತು ವೀರೇಶ್ ಉಪ್ಪಾರ ಹಸೆಮಣಿ ಏರುವವರಿದ್ದರು. ಇವರಿಬ್ಬರು ಪೊಲೀಸ್ ಇಲಾಖೆ ಸೇರಿ ಏಳು ವರ್ಷವಾಗಿತ್ತು.

ವೀರೇಶ್ ಉಪ್ಪಾರ ಕೊಪ್ಪಳ‌ ಜಿಲ್ಲಾ ಪೊಲೀಸ್​​​ ವೈರ್ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದರೆ, ಅರ್ಜುನ್ ನೆಲ್ಲೂರ ಹಾವೇರಿ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ