ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದರು. ಆದರೆ ಕಾರಣಾಂತರಗಳಿಂದ ಅವರಿಬ್ಬರು ದೂರಾದರು. ಆದರೂ ಕೂಡ ಅಂದಿನ ನೆನಪುಗಳು ಮಾಸಿಲ್ಲ.
ಹುಟ್ಟುಹಬ್ಬದ ಪ್ರಯುಕ್ತ ನಡೆಸಿದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಕುರಿತು ಕೆಲವು ಪ್ರಶ್ನೆಗಳು ಎದುರಾದವು. ನೀವು ಯಾಕೆ ಪೌರಾಣಿಕ ಸಿನಿಮಾಗಳನ್ನು ಮಾಡುತ್ತಿಲ್ಲ ಎಂದು ಕೇಳಿದ್ದಕ್ಕೆ ಅವರು ಉತ್ತರ ನೀಡಿದರು. ಆಗ ದರ್ಶನ್ ಫಾರ್ಮ್ಹೌಸ್ನಲ್ಲಿ ನಡೆದಿದ್ದ ಒಂದು ಘಟನೆಯನ್ನು ಕಿಚ್ಚ ಸುದೀಪ್ ನೆನಪಿಸಿಕೊಂಡರು.
‘ಪೌರಾಣಿಕ ಸಿನಿಮಾ ಮಾಡಲು ನನಗೆ ಇರುವ ಸಮಸ್ಯೆ ಏನು ಎಂಬುದನ್ನು ಓಪನ್ ಆಗಿ ಹೇಳುತ್ತೇನೆ ಕೇಳಿ. ಕುದುರೆ ಓಡಿಸುವುದು ನನಗೆ ಆಗಲ್ಲ. ಯಾಕೆಂದರೆ ನನಗೆ ಒಂದು ಅನುಭವ ಆಗಿದೆ. ಈ ರೀತಿಯ ಒಂದು ಪಾತ್ರ ಬಂದಿತ್ತು. ಪ್ರಾಕ್ಟೀಸ್ ಮಾಡಲು ಹೋಗಿದ್ದೆ. ಹೀರೋ ಎಂದರೆ ಫೈಟ್ ಕಲಿಯಬೇಕು, ಕುದುರೆ ಓಡಿಸುವುದು ಕಲಿಯಬೇಕು ಅಂತ ನಮಗೆ ಏನೇನೋ ಹೇಳಿದ್ದರು. ನಾನು ಸೀರಿಯಸ್ ಆಗಿ ಹೋಗಿ, ಒಂದು ವಾರ ಅಥವಾ 10 ದಿನ ಚೆನ್ನಾಗಿ ಓಡಿಸಿದೆ. ಒಂದು ದಿನ ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತು ಅಂತ ಗೊತ್ತಿಲ್ಲ. 20 ಮೀಟರ್ ನನ್ನನ್ನು ಎಳೆದುಕೊಂಡು ಹೋಗಿತ್ತು’ ಎಂದಿದ್ದಾರೆ ಸುದೀಪ್.
ಆಗ ಆದ ಭಯಕ್ಕೆ ಪ್ರಪಂಚವನ್ನೇ ನಾನು ನೋಡಿಬಿಟ್ಟೆ. ಅದಾದ ಮೇಲೆ ಒಂದು ಅರ್ಥ ಆಯಿತು. ಯಾವುದರ ಮೇಲೆ ಹತ್ತಿದ್ದರೂ ಅದರ ಬ್ರೇಕ್ ಮತ್ತು ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು. ಕುದುರೆಯಲ್ಲಿ ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ. ಇದೆಲ್ಲ ಹೊರತುಪಡಿಸಿ, ಇನ್ನೊಂದು ದಿನ ನಾವು ದರ್ಶನ್ ತೋಟಕ್ಕೆ ಹೋಗಿದ್ದೆವು ಎಂದು ಆ ದಿನದ ನೆನಪಿನ ಪುಟವನ್ನು ಸುದೀಪ್ ತೆರೆದರು.
ದರ್ಶನ್ರ ತೋಟಕ್ಕೆ ಹೋದಾಗ ಕುದುರೆ ಹತ್ತು ಅಂತ ನನಗೆ ತುಂಬ ಒತ್ತಾಯ ಮಾಡಿದ. ನೀನೂ ಬೇಡ, ನಿನ್ನ ಕುದುರೆ ಸಹವಾಸವೂ ಬೇಡ ಅಂತ ನಾನು ಹೇಳಿದ್ದೆ. ಆದರೂ ಕುದುರೆ ಹತ್ತಿಸಿದರು. ನಾನು ಮೆತ್ತಗೆ ಹೋಗುತ್ತಿದ್ದೆ. ಅವನು ಕಟಕಟ ಅಂತ ಹೋಗುತ್ತಿದ್ದ. ಹೋಗ್ತಾ ಹೋಗ್ತಾ ಬಿದ್ದುಬಿಟ್ಟು. ಅದನ್ನು ನೋಡಿದ ತಕ್ಷಣ ಮೊದಲು ನಿಲ್ಲಿಸಪ್ಪ ಎಂದೆ. ನಾನು ಅಂದು ಇಳಿದವನು ಇಂದಿನವರೆಗೆ ಮತ್ತೆ ಕುದುರೆ ಹತ್ತಿಲ್ಲ ಎಂದು ಸುದೀಪ್ ಹೇಳಿದರು.