Sunday, August 31, 2025

Bigg Boss | ಕೊನೆಗೂ ಬಿಗ್ ಬಾಸ್ ಸೀಸನ್ 12 ಡೇಟ್ ಅನೌನ್ಸ್ ಆಗೇ ಹೋಯ್ತು! ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದಲ್ಲಿ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸುವ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಪ್ರಮುಖವಾಗಿದೆ. ಪ್ರತೀ ಸೀಸನ್‌ನಲ್ಲಿ ಹೊಸ ತಿರುವು, ಹೊಸ ಸ್ಪರ್ಧಿಗಳು ಹಾಗೂ ಸುದೀಪ್ ಅವರ ನಿರೂಪಣೆ ಪ್ರೇಕ್ಷಕರ ಮನಗೆದ್ದಿರುವುದು ಗೊತ್ತಿರೋ ಸಂಗತಿ. ಈಗ ಬಿಗ್ಬಾಸ್ ಸೀಸನ್ 12 ಆರಂಭದ ದಿನಾಂಕದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದರೆ, ಅದನ್ನು ಸ್ವತಃ ಸುದೀಪ್ ವೇದಿಕೆ ಮೇಲೆಯೇ ಘೋಷಿಸಿದ್ದಾರೆ.

ಮೈಸೂರಿನಲ್ಲಿ ನಿರ್ಮಾಪಕ, ಉದ್ಯಮಿ ಹಾಗೂ ರಾಜಕಾರಣಿ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಟ ಸುದೀಪ್ ಸಹ ಅತಿಥಿಯಾಗಿ ಹಾಜರಿದ್ದರು. ವೇದಿಕೆಯ ಮೇಲೆ ಮಾತನಾಡಿದ ಸುದೀಪ್ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗಳ ಮಧ್ಯೆ “ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಮರಳುತ್ತಿದ್ದೇನೆ, ಆಶೀರ್ವಾದ ಮಾಡಿ” ಎಂದು ಘೋಷಿಸಿದರು. ಇದರೊಂದಿಗೆ ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28ರಂದು ಪ್ರಾರಂಭವಾಗಲಿದೆ ಎಂಬುದು ಅಧಿಕೃತವಾಯಿತು.

ಕಳೆದ ವರ್ಷ ಬಿಗ್ ಬಾಸ್ ಸೀಸನ್ 11 ಸೆಪ್ಟೆಂಬರ್ 29ರಂದು ಆರಂಭಗೊಂಡಿತ್ತು. ಈ ಬಾರಿ ಒಂದು ದಿನ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 28ರಿಂದ ಪ್ರಸಾರ ಆರಂಭವಾಗಲಿದೆ. ಮೂಲಗಳ ಪ್ರಕಾರ ಬಹುತೇಕ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲವರ ಆಯ್ಕೆಯಷ್ಟೇ ಬಾಕಿಯಿದೆ ಎಂದು ತಿಳಿದುಬಂದಿದೆ.

ಗಮನಾರ್ಹ ಅಂಶವೆಂದರೆ, ಕಳೆದ ಸೀಸನ್ ವೇಳೆ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮುಂದುವರಿಸುವುದಿಲ್ಲ, ಇದು ಕೊನೆಯ ಸೀಸನ್ ಎಂದು ಹೇಳಿದ್ದರು. ಆದರೆ ಆಯೋಜಕರ ಮನವೊಲಿಕೆ ಹಾಗೂ ಅಭಿಮಾನಿಗಳ ಅಪಾರ ಬೇಡಿಕೆಯ ಹಿನ್ನೆಲೆಯಲ್ಲಿ, ಸುದೀಪ್ ಮತ್ತೆ ಬಿಗ್ ಬಾಸ್ 12ರ ನಿರೂಪಕರಾಗಿ ಮರಳಿದ್ದಾರೆ.

ಇದನ್ನೂ ಓದಿ