ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಟ್ಫ್ಲಿಕ್ಸ್ ಸಂಸ್ಥೆಯು ಒಟಿಟಿ ವಲಯದಲ್ಲಿ ಇದುವರೆಗೆ ಕಂಡರಿಯದ ಅತಿದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಹಾಲಿವುಡ್‌ನ ಪ್ರಖ್ಯಾತ ಮತ್ತು ದೈತ್ಯ ಸ್ಟುಡಿಯೋ ಎನಿಸಿರುವ ವಾರ್ನರ್ ಬ್ರೋಸ್ ಫಿಲ್ಮ್ ಮತ್ತು ಟಿವಿ ಸ್ಟುಡಿಯೋವನ್ನು ಬರೋಬ್ಬರಿ 74 ಲಕ್ಷ ಕೋಟಿ ರೂಪಾಯಿ ನೀಡಿ ಖರೀದಿಸಲು ನಿರ್ಧರಿಸಿದೆ. ಈ ಐತಿಹಾಸಿಕ ಒಪ್ಪಂದವು ಜಾಗತಿಕ ಮನರಂಜನಾ ಲೋಕದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ.
ಈ ಸ್ವಾಧೀನ ಪ್ರಕ್ರಿಯೆಯಿಂದಾಗಿ, ವಾರ್ನರ್ ಬ್ರೋಸ್ ನಿರ್ಮಿಸಿದ್ದ ವಿಶ್ವವಿಖ್ಯಾತ ಪ್ರಾಜೆಕ್ಟ್‌ಗಳಾದ ಹ್ಯಾರಿ ಪಾಟರ್, ಸೂಪರ್ ಮ್ಯಾನ್, ಬ್ಯಾಟ್ಮ್ಯಾನ್, ಗೇಮ್ ಆಫ್ ಥ್ರೋನ್ಸ್, ಫ್ರೆಂಡ್ಸ್ ಸರಣಿಗಳು ಇನ್ನು ಮುಂದೆ ನೆಟ್ಫ್ಲಿಕ್ಸ್ನ ಕಂಟೆಂಟ್ ಲೈಬ್ರರಿ ಸೇರಲಿವೆ. ವಾರ್ನರ್ ಬ್ರೋಸ್ ಡಿಸ್ಕವರಿ ಕಂಪನಿಯ ಪ್ರಸ್ತುತ ಮೌಲ್ಯ 82 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ 72 ಬಿಲಿಯನ್ ಡಾಲರ್ ಷೇರು ಮೌಲ್ಯದಿಂದಲೇ ಬಂದಿದೆ. ಈ ಬೃಹತ್ ಡೀಲ್ ಮಾರ್ಚ್ 2026ರ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ವಾರ್ನರ್ ಬ್ರೋಸ್‌ನ ಅಪಾರವಾದ ಸಿನಿಮಾ ಮತ್ತು ಸೀರಿಸ್‌ಗಳ ಸಂಗ್ರಹವು ನೆಟ್ಫ್ಲಿಕ್ಸ್ನ ಲೈಬ್ರರಿಯನ್ನು ವಿಶ್ವಾದ್ಯಂತ ಇನ್ನಷ್ಟು ಬೃಹತ್ ಮತ್ತು ಆಕರ್ಷಕವಾಗಿಸಲಿದೆ. ಇದರಿಂದಾಗಿ ನೆಟ್ಫ್ಲಿಕ್ಸ್ನ ಚಂದಾದಾರರಿಗೆ ಇನ್ನು ಮುಂದೆ ಇನ್ನಷ್ಟು ಹೆಚ್ಚು ಗುಣಮಟ್ಟದ ಸಿನಿಮಾಗಳು ಮತ್ತು ಸರಣಿಗಳು ವೀಕ್ಷಣೆಗೆ ಲಭ್ಯವಾಗಲಿವೆ.
ಇತ್ತೀಚಿನ ದಿನಗಳಲ್ಲಿ, ವಾರ್ನರ್ ಬ್ರೋಸ್‌ಗೆ ಸೇರಿದ ಹಲವು ಎಚ್‌ಬಿಓ ಶೋಗಳು ಭಾರತದಲ್ಲಿ ಜಿಯೋ ಹಾಟ್‌ಸ್ಟಾರ್ ವೇದಿಕೆಯಲ್ಲಿ ಪ್ರಸಾರವಾಗುತ್ತಿದ್ದವು. ಈಗ ಈ ಡೀಲ್‌ನಿಂದಾಗಿ, ಆ ಜನಪ್ರಿಯ ಶೋಗಳ ಪ್ರಸಾರ ಹಕ್ಕುಗಳು ನೆಟ್ಫ್ಲಿಕ್ಸ್ ಪಾಲಾಗಲಿವೆ. ಇದು ಹಾಟ್‌ಸ್ಟಾರ್‌ನ ಚಂದಾದಾರರ ಮೇಲೆ ಪ್ರಭಾವ ಬೀರಿ, ಸಂಸ್ಥೆಗೆ ದೊಡ್ಡ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ವಾರ್ನರ್ ಬ್ರೋಸ್ ಡಿಸ್ಕವರಿ ಮಾರಾಟದ ಬಗ್ಗೆ ಚರ್ಚೆ ನಡೆಯುತ್ತಿದ್ದು, Paramount ಸಂಸ್ಥೆ ಖರೀದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಎಲ್ಲರನ್ನೂ ಹಿಂದಿಕ್ಕಿ ನೆಟ್ಫ್ಲಿಕ್ಸ್ ಈ ಮೆಗಾ ಡೀಲ್ ಅನ್ನು ತನ್ನದಾಗಿಸಿಕೊಂಡಿದೆ. ಈ ಸ್ವಾಧೀನವು ನೆಟ್ಫ್ಲಿಕ್ಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಬಜೆಟ್‌ನ ಒರಿಜಿನಲ್ ಸಿನಿಮಾಗಳು ಮತ್ತು ಸರಣಿಗಳನ್ನು ನಿರ್ಮಿಸಲು ಸಹಕಾರಿ ಆಗಲಿದೆ.

