ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಮುಗ್ಧಮನಸ್ಸಿನವರು. ಪ್ರೀತಿಯಿಂದ ಪಾಠ ಹೇಳಿಕೊಟ್ಟ ಶಿಕ್ಷಕರನ್ನು ಅತಿಯಾಗಿ ಪ್ರೀತಿಸುತ್ತಾರೆ. ಅವರು ಸದಾ ನಮ್ಮ ಜತೆ ಇರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಕೆಲಸ, ಟ್ರಾನ್ಸ್‌ಫರ್ ಬಗ್ಗೆ ಮಕ್ಕಳಿಗೇನು ಗೊತ್ತು?
ಬಾಗಲಕೋಟೆ ಜಿಲ್ಲೆಯ ಬುದ್ನಿ ಪಿಎಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ಸಹಿಸಲಾಗದೆ ಶಾಲಾ ಮಕ್ಕಳು ಗೊಳೋ ಎಂದು ಕಣ್ಣೀರಿಟ್ಟಿದ್ದಾರೆ. ನಿಮ್ಮನ್ನು ಕಳಿಸೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಶಿಕ್ಷಕರಾದ ವೆಂಕಟೇಶ್ ಪಾಟೀಲ್ ಹಾಗೂ ಬಿಜಿ ರಾಮನಗೌಡ ಪಾಟೀಲ್ ಅವರು ಬೇರೆಡೆಗೆ ವರ್ಗಾವಣೆಯಾಗಿದ್ದು, ಇದರ ಹಿನ್ನೆಲೆಯಲ್ಲಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಆಳವಾದ ಬಾಂಧವ್ಯವನ್ನು ಇದು ಎತ್ತಿ ತೋರಿಸುತ್ತದೆ. ಮಕ್ಕಳಷ್ಟೇ ಅಲ್ಲದೆ, ಗ್ರಾಮಸ್ಥರು ಕೂಡ ವರ್ಗಾವಣೆಗೊಂಡ ಶಿಕ್ಷಕರನ್ನು ಗೌರವದಿಂದ ಬೀಳ್ಕೊಟ್ಟಿದ್ದು, ಶಿಕ್ಷಕರಿಗೆ ಪುಷ್ಪವೃಷ್ಟಿಗೈದು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ.
ಇನ್ನು ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಗೇಟ್ ಬಂದ್ ಮಾಡಿ ಭಾವುಕರಾಗಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಾದ ವೀರಪ್ಪ ಅವರನ್ನು ಶಾಲೆಯಿಂದ ಹೊರಗೆ ಹೋಗದಂತೆ ಕಣ್ಣೀರು ಹಾಕಿದ್ದಾರೆ. ನಾವು ಹೋಗಲ್ಲ, ಸರ್ ಬರಬೇಕು, ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

