ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಹೈನೋದ್ಯಮ ಇದೀಗ ಸಂಕಷ್ಟವೊಂದನ್ನು ಎದುರಿಸುತ್ತಿದೆ. ಹಸುಗಳನ್ನೇ ಕುಟುಂಬದ ಸದಸ್ಯರಂತೆ ಸಾಕುವ ರೈತರಿಗೆ, ಇತ್ತೀಚಿನ ಚಳಿಗಾಲ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಳಿಯ ಪರಿಣಾಮ ಹಸುಗಳ ಆಹಾರ ಸೇವನೆ ಕಡಿಮೆಯಾಗಿದ್ದು, ನೀರು ಕುಡಿಯುವ ಪ್ರಮಾಣವೂ ಇಳಿಕೆಯಾಗಿರುವುದರಿಂದ ಹಾಲಿನ ಉತ್ಪಾದನೆ ಗಮನಾರ್ಹವಾಗಿ ಕುಸಿದಿದೆ.
ಹಾಲು ಉತ್ಪಾದನೆಯಲ್ಲಿ ಹೆಸರು ಮಾಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಸುಗಳನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡವರು. ಆದರೆ ಈ ಬಾರಿ ಚಳಿ ಹೈನೋದ್ಯಮದ ಮೇಲೆ ನೇರ ಹೊಡೆತ ನೀಡಿದೆ. ಪರಿಣಾಮವಾಗಿ, ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವಾದ ಕೋಚಿಮುಲ್ (KOCHIMUL) ಮೆಗಾ ಡೈರಿಗೆ ಪ್ರತಿದಿನ ಸರಾಸರಿ 25 ಸಾವಿರ ಲೀಟರ್ ಹಾಲಿನ ಕೊರತೆ ಉಂಟಾಗುತ್ತಿದೆ.
ಇದನ್ನೂ ಓದಿ: Rice series 29 | ರುಚಿರುಚಿಯಾದ ಸಿಹಿ ಅನ್ನ ತಿಂದಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ
ಈ ಸ್ಥಿತಿ ಮುಂದುವರೆದರೆ ಡೈರಿಯ ದೈನಂದಿನ ಅಗತ್ಯ ಪೂರೈಕೆಯೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ, ಕೋಚಿಮುಲ್ ಆಡಳಿತ ಮಂಡಳಿ ತಾತ್ಕಾಲಿಕ ಕ್ರಮ ಕೈಗೊಂಡಿದೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳುಗಳಿಗೆ ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹಧನ ಹೆಚ್ಚಳ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ರೈತರು ಹಸುಗಳ ಆರೈಕೆಗೆ ಹೆಚ್ಚಿನ ಗಮನ ನೀಡುತ್ತಾರೆ ಎಂಬ ನಿರೀಕ್ಷೆ ಒಕ್ಕೂಟಕ್ಕಿದೆ.
ಒಟ್ಟಾರೆ, ಹಸುಗಳ ಆರೋಗ್ಯ ಸುಧಾರಣೆ ಮತ್ತು ಯೋಗ್ಯ ದರ ನೀಡದಿದ್ದರೆ, ಚಿಕ್ಕಬಳ್ಳಾಪುರದ ಹೈನೋದ್ಯಮ ಇನ್ನಷ್ಟು ಸಂಕಷ್ಟಕ್ಕೆ ತಳ್ಳಲ್ಪಡುವ ಭೀತಿ ಎದುರಾಗಿದೆ.

