ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ಶವ ಹುಟುಹಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಶೋಧ ಮುಂದುವರಿಸುವ ಬಗ್ಗೆ ಎಸ್‌ಐಟಿ ಅಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆ ಮಾಡಿಸಿದ್ದಾರೆ ಎಂಬ ವ್ಯಕ್ತಿಯೋರ್ವರ ಹೇಳಿಕೆ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್. ಅಶೋಕ, ಯಾರು ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಅಪಚಾರ ಮಾಡುತ್ತಾ ಇದ್ದಾರೆಯೋ ಅದೇ ವ್ಯಕ್ತಿ, ಮುಖ್ಯಮಂತ್ರಿ ಬಗ್ಗೆಯೂ ಆರೋಪ ಮಾಡಿದ್ದಾರೆ ಎಂದು ಸದನದ ಗಮನ ಸೆಳೆದರು. ಈ ವೇಳೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಬಗ್ಗೆ ಗೃಹ ಇಲಾಖೆ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.