ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಾತ್ರೆಮೈದಾನ ಗ್ರಾಮದಲ್ಲಿ ಚಿರತೆಯೊಂದು ಅಟ್ಟಹಾಸ ಮೆರೆದಿದೆ. ಮನೆ ಮುಂದಿನ ಅಂಗಳದಲ್ಲಿ ಗಾಢ ನಿದ್ರೆಯಲ್ಲಿದ್ದ ಸಾಕು ನಾಯಿಯ ಮೇಲೆ ದಾಳಿ ಮಾಡಿದ ಚಿರತೆ, ಅದನ್ನು ಹೊತ್ತೊಯ್ದ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಗ್ರಾಮದ ಬಸವರಾಜ್ ಎಂಬುವವರು ತಮ್ಮ ತೋಟದ ಅಡಿಕೆಯನ್ನು ಮನೆ ಮುಂದಿನ ಅಂಗಳದಲ್ಲಿ ಒಣಗಲು ಹಾಕಿದ್ದರು. ಇತ್ತೀಚೆಗೆ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ, ಅಡಿಕೆಗೆ ಕಾವಲಿರಲಿ ಎಂದು ತಮ್ಮ ಸಾಕು ನಾಯಿಯನ್ನು ಅಂಗಳದಲ್ಲಿ ಬಿಟ್ಟಿದ್ದರು. ಆದರೆ, ಕಳ್ಳರ ಕಾವಲಿಗೆ ನಿಂತಿದ್ದ ನಾಯಿಯೇ ಚಿರತೆಗೆ ಬಲಿಯಾಗಿದೆ.
ಇದನ್ನೂ ಓದಿ:
ಚಿರತೆಯ ಬೇಟೆಯಾಡುವ ತಂತ್ರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಮೈನಡುಗಿಸುವಂತಿದೆ. ನಾಯಿ ನಿದ್ರಿಸುತ್ತಿದ್ದಾಗ ಅತೀ ಸೂಕ್ಷ್ಮವಾಗಿ ಹೆಜ್ಜೆಯಿಡುತ್ತಾ ಬಂದ ಚಿರತೆ, ಮೊದಲು ನಾಯಿಯನ್ನು ಎಬ್ಬಿಸಿದೆ. ನಾಯಿ ಎಚ್ಚರಗೊಂಡು ಚೇತರಿಸಿಕೊಳ್ಳುವಷ್ಟರಲ್ಲೇ ಮಿಂಚಿನ ವೇಗದಲ್ಲಿ ದಾಳಿ ಮಾಡಿ ಕುತ್ತಿಗೆಯನ್ನು ಬಲವಾಗಿ ಕಚ್ಚಿ ಹಿಡಿದಿದೆ. ನಾಯಿ ಮೃತಪಟ್ಟಿದೆ ಎಂದು ಖಚಿತಪಡಿಸಿಕೊಂಡ ನಂತರ ಚಿರತೆ ಅದನ್ನು ಎಳೆದೊಯ್ದಿದೆ.
ಜನವಸತಿ ಪ್ರದೇಶಕ್ಕೆ, ಅದರಲ್ಲೂ ಮನೆಯ ಅಂಗಳಕ್ಕೇ ಬಂದು ಚಿರತೆ ಬೇಟೆಯಾಡಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಜನ ಭಯಪಡುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ, ಈ ಅಪಾಯಕಾರಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

