ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ. 11 ರಂದು ಬಿಡುಗಡೆಯಾದ ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಪ್ರೇಕ್ಷಕರ ಮನ ಗೆದ್ದಿದೆ. ರಾಜಕೀಯ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ದಿನ ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ.
ಸಿನಿಮಾದ ಯಶಸ್ಸಿನ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ನಿಜ ಜೀವನದಲ್ಲಿ ರಾಜಕೀಯ ಪ್ರವೇಶ ಮಾಡುತ್ತಾರೆಯೇ ಎಂಬ ಪ್ರಶ್ನೆ ಎಲ್ಲೆಡೆ ಮನೆ ಮಾಡಿದೆ. ಈ ಕುತೂಹಲಕ್ಕೆ ಅವರ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ್ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ.
ದಿನಕರ್ ತೂಗುದೀಪ ಅವರ ಹೇಳಿಕೆಯ ಪ್ರಕಾರ, ದರ್ಶನ್ ಅವರು ರಾಜಕೀಯಕ್ಕೆ ಬರಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವವರು ಅವರ ಅಭಿಮಾನಿಗಳು. ಅಭಿಮಾನಿಗಳು ಹೇಗೆ ಹೇಳುತ್ತಾರೋ ಹಾಗೆಯೇ ದರ್ಶನ್ ಅವರು ನಡೆದುಕೊಳ್ಳುತ್ತಾರೆ.
ದಿನಕರ್ ಅವರು, “ದರ್ಶನ್ ಅವರಿಗೆ ರಾಜಕೀಯಕ್ಕೆ ಬರಬೇಕು ಎಂಬ ಯಾವುದೇ ಆಸೆ ಇಲ್ಲ. ತಮ್ಮನಾಗಿ ಆ ಬಗ್ಗೆ ನನಗಂತೂ ಯಾವುದೇ ಮಾಹಿತಿ ಇಲ್ಲ. ರಾಜಕೀಯಕ್ಕೆ ಬರುತ್ತೇನೆ ಎಂದು ಅವರು ನನ್ನ ಬಳಿ ಎಂದಿಗೂ ಹೇಳಿಲ್ಲ. ಆದರೆ, ಅಭಿಮಾನಿಗಳು ಇಷ್ಟಪಟ್ಟರೆ ದರ್ಶನ್ ಅವರು ಏನು ಬೇಕಾದರೂ ಮಾಡುತ್ತಾರೆ,” ಎಂದು ಹೇಳುವ ಮೂಲಕ ಅಂತಿಮ ನಿರ್ಧಾರವನ್ನು ಅಭಿಮಾನಿಗಳ ಕೈಗೆ ಬಿಟ್ಟಿದ್ದಾರೆ.
ಒಟ್ಟಿನಲ್ಲಿ, ‘ದಿ ಡೆವಿಲ್’ ಚಿತ್ರದ ಮೂಲಕ ರಾಜಕೀಯದ ಸನ್ನಿವೇಶಗಳನ್ನು ತೆರೆ ಮೇಲೆ ತಂದಿರುವ ದರ್ಶನ್ ಅವರ ನಿಜ ಜೀವನದ ರಾಜಕೀಯದ ನಡೆ ಸಂಪೂರ್ಣವಾಗಿ ಅವರ ಅಪಾರ ಸಂಖ್ಯೆಯ ಅಭಿಮಾನಿ ಸಮೂಹದ ಇಚ್ಛೆಯ ಮೇಲೆ ನಿಂತಿದೆ.

