ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಸೇರಿದಂತೆ ಐವರು ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಕುರಿತಾದ ಅರ್ಜಿ ಇಂದು ಸಿಸಿಎಚ್ 57ನೇ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಪ್ರಕಾರ, ದರ್ಶನ್‌ನ್ನು ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್‌ರನ್ನು ಶಿವಮೊಗ್ಗ ಜೈಲಿಗೆ, ನಾಗರಾಜ್‌ನ್ನು ಕಲಬುರಗಿ ಜೈಲಿಗೆ ಹಾಗೂ ಪ್ರದೂಷ್‌ನ್ನು ಬೆಳಗಾವಿ ಜೈಲಿಗೆ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ. ಪವಿತ್ರಾ ಗೌಡ ಮತ್ತು ಅನುಕುಮಾರ್ ಮಾತ್ರ ಪರಪ್ಪನ ಅಗ್ರಹಾರದಲ್ಲೇ ಉಳಿಯುವಂತೆ ಮನವಿ ಸಲ್ಲಿಸಲಾಗಿದೆ.
ಇದೇ ವೇಳೆ, ಆರೋಪಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಟ್ರಯಲ್ ಶೀಘ್ರದಲ್ಲೇ ಆರಂಭವಾಗಲಿದ್ದು, ಪ್ರತೀ ಬಾರಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ಆರೋಪಿಗಳು ದೂರದ ಜೈಲುಗಳಲ್ಲಿ ಇದ್ದರೆ ಅವರನ್ನು ಕರೆ ತರುವುದು ಕಷ್ಟವಾಗುತ್ತದೆ ಎಂಬ ಅಂಶವನ್ನು ವಕೀಲರು ಮುಂದಿರಿಸುವ ನಿರೀಕ್ಷೆಯಿದೆ. ಈಗಾಗಲೇ ಪ್ರದೂಷ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದು, ಉಳಿದ ನಾಲ್ವರು ಆರೋಪಿಗಳ ಪರವೂ ಇಂದು ಆಕ್ಷೇಪಣೆ ಸಲ್ಲಿಕೆ ಆಗುವ ಸಾಧ್ಯತೆ ಇದೆ.