ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತಿ ದೊಡ್ಡ ಕ್ರೀಡಾಕೂಟವೆಂದೇ ಪರಿಗಣಿಸಲ್ಪಡುವ ಫಿಫಾ ವಿಶ್ವಕಪ್ ನ 2026ರ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಫಿಫಾ ಪ್ರಕಟಿಸಿದ್ದು, ಜೂನ್ 11ರಿಂದ ಜುಲೈ 19ರವರೆಗೆ ಪಂದ್ಯಾವಳಿಗಳು ನಡೆಯಲಿವೆ. ಈ ಬಾರಿ ಮೊದಲ ಬಾರಿಗೆ 48 ರಾಷ್ಟ್ರಗಳ ತಂಡಗಳು ವಿಶ್ವಕಪ್ ವೇದಿಕೆಯಲ್ಲಿ ಪೈಪೋಟಿಗೆ ಇಳಿಯುತ್ತಿರುವುದು ಈ ಟೂರ್ನಿಗೆ ಹೆಚ್ಚು ವಿಶೇಷತೆ ತಂದಿದೆ.
ವಿಶಾಖ ಟೂರ್ನಿಯ ಡ್ರಾ ಸಮಾರಂಭ ವಾಷಿಂಗ್ಟನ್‌ನ ಕೆನಡಿ ಸೆಂಟರ್‌ನಲ್ಲಿ ನಡೆಯಿತು. ಕಂಪ್ಯೂಟರ್ ಆಧಾರಿತ ಡ್ರಾ ಪ್ರಕ್ರಿಯೆಯಲ್ಲಿ ಜಾಗತಿಕ ಫುಟ್ಬಾಲ್ ದೈತ್ಯರ ಗ್ರೂಪ್ ವಿಭಾಗ ನಿಗದಿಯಾಗಿದೆ. ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಗ್ರೂಪ್ ಜೆ ಯಲ್ಲಿ ಸ್ಥಾನ ಪಡೆದರೆ, ಐದು ಬಾರಿ ಚಾಂಪಿಯನ್ ಬ್ರೆಜಿಲ್ ಗ್ರೂಪ್ ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಫ್ರಾನ್ಸ್ ಗ್ರೂಪ್ ಐಯಲ್ಲಿ, ಇಂಗ್ಲೆಂಡ್ ಗ್ರೂಪ್ ಎಲ್‌ನಲ್ಲಿ, ಜರ್ಮನಿ ಗ್ರೂಪ್ ಇನಲ್ಲಿ, ನೆದರ್ಲ್ಯಾಂಡ್ಸ್ ಗ್ರೂಪ್ ಎಫ್‌ನಲ್ಲಿ ಮತ್ತು ಪೋರ್ಚುಗಲ್ ಗ್ರೂಪ್ ಕೆ ಯಲ್ಲಿ ಸ್ಥಾನ ಪಡೆದಿವೆ.
ಗ್ರೂಪ್ ಎಚ್ ಅತ್ಯಂತ ಕಠಿಣ ಗ್ರೂಪ್ ಎನ್ನಲಾಗಿದ್ದು, ಇಲ್ಲಿ ಸ್ಪೇನ್, ಉರುಗ್ವೆ ಮತ್ತು ಸೌದಿ ಅರೇಬಿಯಾ ಮುಖಾಮುಖಿಯಾಗಲಿವೆ. ಏಷ್ಯಾ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕಾದ ಬಲಿಷ್ಠ ತಂಡಗಳು ಒಂದೇ ಗ್ರೂಪಿನಲ್ಲಿ ಸೇರಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇತಿಹಾಸದಲ್ಲೇ ಅತಿ ದೊಡ್ಡ ವಿಶ್ವಕಪ್ ಎಂದೇ ಕರೆಯಲಾಗುತ್ತಿರುವ ಈ ಟೂರ್ನಿಗೆ ಈಗಾಗಲೇ ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

