ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಇಂದು ಚರ್ಚೆಯಾಗುತ್ತಿರುವ ವಿಷಯವೆಂದರೆ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಟ್ರೈಲರ್. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದರೂ, ಟ್ರೈಲರ್ ಬಿಡುಗಡೆಯಾದ ಕ್ಷಣದಿಂದಲೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ದರ್ಶನ್ ಅಭಿಮಾನಿಗಳಿಗೆ long gap ನಂತರ ಸಿಕ್ಕ ಈ ವೀಡಿಯೋ ನಿಜಕ್ಕೂ ‘ಮಾಸ್ ರಿಟರ್ನ್’ ಫೀಲಿಂಗ್ ಕೊಟ್ಟಿದೆ ಎಂದೇ ಹೇಳಬಹುದು. ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರುವ ಟ್ರೈಲರ್, ದರ್ಶನ್ ಮರುಆಗಮನಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಸಂದೇಶ ನೀಡಿದೆ.
ಟ್ರೈಲರ್‌ನಲ್ಲಿ ದರ್ಶನ್ ಸಂಪೂರ್ಣ ಮಾಸ್ ಅವತಾರದಲ್ಲಿ ಮಿಂಚಿದ್ದು, ಒಂದರ ಹಿಂದೆ ಒಂದಾಗಿ ಬರುವ ಪಂಚ್ ಡೈಲಾಗ್ ಕೇಳಿ ಅಭಿಮಾನಿಗಳ ದಿಲ್ ಖುಷ್ ಆಗಿರೋದಂತು ಸತ್ಯ. ಬಣ್ಣ ಬಣ್ಣದ ಲುಕ್‌ಗಳು, ವೇಗದ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ‘ಆಸೆ ಪಟ್ರೆ ಕೇಳ್ಬೇಕು, ಕೊಡದಿದ್ರೆ ಕಿತ್ಕೊಳ್ಬೇಕು ’, ‘ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದ್ದೀನಿ ಚಿನ್ನ’ ಎನ್ನುವ ಡೈಲಾಗ್ ಈಗಾಗಲೇ ವೈರಲ್ ಆಗಿದೆ. ನಿರ್ದೇಶಕ ಮಿಲನ ಪ್ರಕಾಶ್ ದರ್ಶನ್‌ನ್ನು ಇನ್ನಷ್ಟು ಸ್ಟೈಲಿಷ್ ಶೈಲಿಯಲ್ಲಿ ತೋರಿಸಿದ್ದು ಟ್ರೈಲರ್‌ಗೆ ವಿಶೇಷ ಹೊಳಪು ತಂದಿದೆ.
ಶರ್ಮಿಳಾ ಮಾಂಡ್ರೆ, ರಚನಾ ರೈ ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರು ಕಾಣಿಸಿಕೊಂಡಿದ್ದರೂ, ಟ್ರೈಲರ್ ಪ್ರಾರಂಭದಿಂದ ಅಂತ್ಯವರೆಗೆ ಸಂಪೂರ್ಣ ವೇದಿಕೆ ದರ್ಶನ್‌ಗೆ ಮೀಸಲಾಗಿರುವಂತೆ ಕಂಡುಬಂದಿದೆ.
ಅಜನೀಶ್ ಲೋಕನಾಥ್‌ನ ಸಂಗೀತ ಮತ್ತು ಸುಧಾಕರ್ ಎಸ್.ರಾಜ್ ಅವರ ಕ್ಯಾಮೆರಾ ವರ್ಕ್ ಟ್ರೈಲರ್‌ಗೆ ಗಟ್ಟಿತನ ನೀಡಿದ್ದು, ಚಿತ್ರದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಡಿಸೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಡೆವಿಲ್’, 30–40 ಕೋಟಿ ಬಜೆಟ್‌ನ ಭರ್ಜರಿ ಪ್ರಾಜೆಕ್ಟ್ ಆಗಿದ್ದು, ಅಭಿಮಾನಿಗಳು ಇದು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಸೃಷ್ಟಿಸಲಿದೆ ಎಂಬ ನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ.

