ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದ್ದು, ದೀಪಾವಳಿ ಹಬ್ಬದಿಂದ ಐದು ದಿನಗಳ ಕಾಲ ನಡೆಯುವ ಅಂಟಿಗೆ-ಪಿಂಟಿಗೆ ಸಂಭ್ರಮದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.
ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಂಸ್ಕೃತಿಕ ವೇದಿಕೆ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಸಹಯೋಗದಲ್ಲಿ ದೀಪಾವಳಿಯ ವಿಶೇಷವಾದ ಅಂಟಿಗೆ-ಪಿಂಟಿಗೆಗೆ ಆದಿ ಚುಂಚನ ಗಿರಿ ಮಹಾ ಸಂಸ್ಥಾನದ ಶಾಖಾ ಮಠದ ನಾದಾನಂದನಾಥ ಸ್ವಾಮೀಜಿ ದೀಪ ಹಚ್ಚುವ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಾಂಪ್ರದಾಯಿಕ ಆಚರಣೆ , ಆರಾಧನೆಗಳನ್ನು ಉಳಿಸಿಕೊಳ್ಳುವ ಮೂಲಕ ಯುವಜನರಿಗೆ ತಲುಪಿಸುವ ಇಂತಹ ಸಾಂಘಿಕ ಪ್ರಯತ್ನಗಳು ನಿರಂತರವಾಗಿ ಮುಂದುವರೆಯಬೇಕು, ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ಹಚ್ಚುವ ಇಂತಹ ಕಲೆಗಳು ಮುಂದುವರೆಯಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ , ಹೊಸ ತಲೆಮಾರಿಗೆ ಮಲೆನಾಡಿನ ವಿಶಿಷ್ಟ ಕಲೆಯಾದ ಅಂಟಿಗೆ-ಪಿಂಟಿಗೆಯನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಪ್ರತಿವರ್ಷ ತೀರ್ಥಹಳ್ಳಿ, ಸಾಗರ, ಭದ್ರಾವತಿ, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಅಂಟಿಗೆ-ಪಿಂಟಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕಲಾವಿದ ಹರೀಶ್, ಮಲೆನಾಡಿನ ಜಾನಪದ ಕಲೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ದಾರಿಪದ, ತುಳಸೀ ಪದ, ಎಣ್ಣೆ ಹಾಕುವ ಪದ ಸೇರಿದಂತೆ ವಿವಿಧ ವಿಶಿಷ್ಠ ಪದಗಳನ್ನು ಗುಂಪು ಗುಂಪಾಗಿ ಹಾಡುವ ಮೂಲಕ ಮನೆ ಮನೆಗೆ ತೆರಳಿ ಜ್ಯೋತಿ ಹತ್ತಿಸಿ ಬೆಳಕು ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ಕಲಾವಿದ ಲಿಂಗಪ್ಪ, ಕಳೆದ ಹಲವಾರು ವರ್ಷಗಳಿಂದ ಅಂಟಿಗೆ-ಪಂಟಿಗೆ ಕಲೆಯನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಬಹು ಮಾಧ್ಯಮಗಳ ಭರಾಟೆಯಲ್ಲಿ ಜನಪದ ಕಲೆಗಳು ದೂರ ಸರಿಯುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮದ ಕಳೆ ಹೆಚ್ಚಿಸುತ್ತಿದೆ ಮಲೆನಾಡಿನ ವಿಶಿಷ್ಟ ಕಲೆ ಅಂಟಿಗೆ-ಪಿಂಟಿಗೆ

