Friday, October 24, 2025

ಇಂದು ಹೊರಬೀಳಲಿದೆ ಹಾಸಿಗೆ-ದಿಂಬು ತೀರ್ಪು! ದಾಸನಿಗೆ ಸಿಗುತ್ತಾ ಗುಡ್ ನ್ಯೂಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಇಂದು ಕೋರ್ಟ್‌ನಿಂದ ಪ್ರಮುಖ ನಿರ್ಧಾರ ಬರುವ ನಿರೀಕ್ಷೆ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಹಾಸಿಗೆ ಮತ್ತು ದಿಂಬಿನ ಸೌಲಭ್ಯಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರು 57ನೇ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಈ ಅರ್ಜಿಯ ಕುರಿತಂತೆ ತೀರ್ಪು ನೀಡಲಿದೆ.

ದರ್ಶನ್ ಪರ ವಕೀಲರು ಕೋರ್ಟ್‌ನಲ್ಲಿ, “ಜೈಲಿನಲ್ಲಿ ಮಾನವೀಯ ಸೌಲಭ್ಯಗಳು ಲಭ್ಯವಿಲ್ಲ. ಹಾಸಿಗೆ, ದಿಂಬು ಮತ್ತು ಆರೋಗ್ಯ ಸೇವೆ ನೀಡದೆ ಅಧಿಕಾರಿಗಳು ತಡೆ ಹಿಡಿದಿದ್ದಾರೆ,” ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಕಾನೂನು ಪ್ರಾಧಿಕಾರದಿಂದ ವರದಿ ಕೇಳಿಸಿಕೊಂಡು, ಜೈಲಿನ ಪರಿಸ್ಥಿತಿಯನ್ನು ಪರಿಶೀಲಿಸಿತು. ವರದಿಯ ಪ್ರಕಾರ, ಕಾನೂನುಬದ್ಧ ನಿಯಮಗಳೊಳಗೆ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.

ಜೈಲು ಅಧಿಕಾರಿಗಳು ದರ್ಶನ್‌ರ ಆರೋಪಗಳನ್ನು ತಳ್ಳಿ, “ನಿಯಮದ ಪ್ರಕಾರ ಅಗತ್ಯ ಸೌಲಭ್ಯಗಳನ್ನೇ ನೀಡಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಇಂದು ತನ್ನ ಅಂತಿಮ ಆದೇಶ ನೀಡಲಿದ್ದು, ಆ ತೀರ್ಪು ದರ್ಶನ್‌ರ ಜೈಲು ಜೀವನವನ್ನು ಸ್ವಲ್ಪ ಸುಲಭಗೊಳಿಸಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.

error: Content is protected !!