ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಯಾವುದೇ ಬಿರುಕು ಅಥವಾ ಭಿನ್ನಾಭಿಪ್ರಾಯ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ಆರ್‌ಎಸ್‌ಎಸ್ ಶತಮಾನೋತ್ಸವ ಉಪನ್ಯಾಸ ಸರಣಿ’ಯಲ್ಲಿ ಮಾತನಾಡಿದ ಭಾಗವತ್, ಸಂಘ ಮತ್ತು ಸರ್ಕಾರ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಮನ್ವಯವನ್ನು ಕಾಯ್ದುಕೊಳ್ಳುತ್ತಿವೆ ಎಂದು ಹೇಳಿದರು.
ಯಾವುದೇ ವಿಷಯದ ಬಗ್ಗೆ ಆರ್‌ಎಸ್‌ಎಸ್ ಸಲಹೆ ನೀಡಬಹುದು, ಆದರೆ ಅಂತಿಮ ನಿರ್ಧಾರವನ್ನು ಬಿಜೆಪಿಯೇ ತೆಗೆದುಕೊಳ್ಳುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಪಾದಿಸಿದರು.
ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದೊಂದಿಗೆ ಸಂಘವು ಉತ್ತಮ ಸಮನ್ವಯವನ್ನು ಹೊಂದಿದೆ. ಒಳ್ಳೆಯ ಕೆಲಸ ಮಾಡುವಲ್ಲಿ ನಮ್ಮ ಸಹಾಯ ಬೇಕಾದರೆ ಬಿಜೆಪಿಗೆ ಮಾತ್ರವಲ್ಲ, ಎಲ್ಲರಿಗೂ ನಾವು ಸಹಾಯ ಮಾಡುತ್ತೇವೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.