Thursday, September 4, 2025

ಕಾಂಗ್ರೆಸ್‌ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಮಧುಗಿರಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ. ಯಾವ ಕಾರಣಕ್ಕೂ ನಾನು ಪಕ್ಷ ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಣ್ಣ ಅವರು ಅನ್ನಭಾಗ್ಯ ಯೋಜನೆ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. “ಅನ್ನಭಾಗ್ಯ ನನಗೆ ತುಂಬಾ ಪ್ರೀತಿಯ ಯೋಜನೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾತ್ರ ಬಡವರಿಗಾಗಿ ಇಂತಹ ಕ್ರಾಂತಿಕಾರಿ ಕಾರ್ಯಕ್ರಮ ಜಾರಿಗೆ ಬಂದಿತ್ತು. ಬೇರೆಯವರು ಸಿಎಂ ಆಗಿದ್ದಾಗ ಇಂತಹ ಯೋಜನೆ ಬಂದಿಲ್ಲ,” ಎಂದು ಅವರು ತಿಳಿಸಿದರು.

ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡಿದ ಅವರು, “ನಾನು 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಈಗ ಚುನಾವಣೆ ಬಂದರೂ ಇನ್ನಷ್ಟು ಮತಗಳಿಂದ ಗೆಲ್ಲುವ ವಿಶ್ವಾಸ ನನಗೆ ಇದೆ. ನಾನು ಭ್ರಷ್ಟಾಚಾರ ಮಾಡಿಲ್ಲ, ಆದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ,” ಎಂದು ಹೇಳಿದರು.

ಬಿಜೆಪಿಗೆ ಸೇರುವ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ ಅವರು, “ನಾನ್ಯಾಕೆ ಬಿಜೆಪಿ ಸೇರಲಿ? ಪಾರ್ಟಿ ನನಗೆ ಯಾವುದೇ ಮೋಸ ಮಾಡಿಲ್ಲ. ಜನರು ಯಾವ ಪಕ್ಷದ ಬಣ್ಣದಲ್ಲಿದ್ದರೂ ನನಗೆ ಬೆಂಬಲ ನೀಡುತ್ತಾರೆ. ಸಿದ್ದರಾಮಯ್ಯ ನಾಯಕತ್ವ ಇರುವವರೆಗೆ ನನ್ನ ಭವಿಷ್ಯಕ್ಕೆ ತೊಂದರೆ ಇಲ್ಲ,” ಎಂದು ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಹಣ ಅಥವಾ ಜಾತಿ ಪ್ರಾಬಲ್ಯವಿದ್ದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, “ಇದು ಎರಡೂ ನನ್ನ ಬಳಿ ಇಲ್ಲ. ಆದರೂ ಕ್ಷೇತ್ರದ ಜನರ ಬೆಂಬಲವೇ ನನ್ನ ದೊಡ್ಡ ಬಲ,” ಎಂದು ಹೇಳಿದರು.

ಇದನ್ನೂ ಓದಿ