ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ದೇವನಹಳ್ಳಿ ಹೊರವಲಯದಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಚ್ಚಲ್ಪಟ್ಟಿದ್ದ ಹಳೆಯ ಟೋಲ್ ಪ್ಲಾಜಾ ಬೂತ್‌ಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಅಪ್ಪಚ್ಚಿಯಾಗಿದ್ದು, ಟೋಲ್ ಬೂತ್ ಸಂಪೂರ್ಣವಾಗಿ ಧ್ವಂಸಗೊಂಡಿದೆ.
ಅಪಘಾತ ಸಂಭವಿಸಿದ ತಕ್ಷಣ ಸಹಾಯ ಮಾಡುವ ನೆಪದಲ್ಲಿ ಸ್ಥಳಕ್ಕೆ ಬಂದ ಕಿಡಿಗೇಡಿಗಳು, ಬಸ್ಸಿನಲ್ಲಿದ್ದ ಪ್ರಯಾಣಿಕರ ಅಸಹಾಯಕತೆಯನ್ನು ಬಳಸಿಕೊಂಡು ಮೂರು ಐಫೋನ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಪ್ರಾಣಾಪಾಯದಲ್ಲಿದ್ದವರಿಗೆ ನೆರವಾಗುವ ಬದಲು ಅವರ ವಸ್ತುಗಳನ್ನೇ ದೋಚಿದ ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತದ ಸಮಯದಲ್ಲಿ ಟೋಲ್ ಬೂತ್ ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಅಲ್ಲಿ ಯಾವುದೇ ಸಿಬ್ಬಂದಿ ಅಥವಾ ವಾಹನಗಳು ಇರಲಿಲ್ಲ. ಹೀಗಾಗಿ ಭಾರಿ ಜೀವಹಾನಿ ತಪ್ಪಿದಂತಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಎಮರ್ಜೆನ್ಸಿ ಎಕ್ಸಿಟ್ ದ್ವಾರದ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಚಾಲಕ ಹಾಗೂ ಸಹ-ಚಾಲಕನನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ರಸ್ತೆಯಲ್ಲಿ ಕೇವಲ 500 ಮೀಟರ್ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. ಒಂದು ಟೋಲ್ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದರೂ, ಅದರ ಶಿಥಿಲಾವಸ್ಥೆಯ ಬೂತ್‌ಗಳನ್ನು ತೆರವುಗೊಳಿಸದಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳತನ ಎಸಗಿದ ಕಿಡಿಗೇಡಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

