Wednesday, September 24, 2025

ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಜೀವನದ ಇಣುಕುನೋಟವಿದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌ಎಲ್‌ ಭೈರಪ್ಪ ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೈರಪ್ಪನವರು (94)  ಹೃದಯಸ್ತಂಭನದಿಂದ  ಮಧ್ಯಾಹ್ನ 2:30ಕ್ಕೆ ರಾಷ್ಟ್ರೋತ್ತಾನ ಆಸ್ಪತ್ರೆಯಲ್ಲಿ ನಿಧನರಾದರು.

ಭೈರಪ್ಪನವರ ಪೂರ್ತಿ ಹೆಸರು ಸಂತೇವರ ಲಿಂಗಣ್ಣಯ್ಯ ಭೈರಪ್ಪ.ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 1934ರ ಜು. 26ರಂದು ಹೊಯ್ಸಳ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಭೈರಪ್ಪನವರು ಬಾಲ್ಯದಿಂದಲೇ ಬಡತನದ ಬೇಗೆಯಲ್ಲಿ ಬೆಂದರು.

ಬೇಜವಾಬ್ದಾರಿ ತಂದೆ, ಕಷ್ಟಪಟ್ಟು ಬೆಳೆಸಿದ ತಾಯಿ, ಪ್ಲೇಗ್ ಮಹಾಮಾರಿಯಿಂದ ತಮ್ಮವರೆನ್ನೆಲ್ಲಾ ಕಳೆದುಕೊಂಡರೂ ಕಡುಕಷ್ಟದಲ್ಲಿ ಎದೆಗುಂದದೆ ತಮ್ಮನ್ನು ಬೆಳೆಸಿದ ಅವರ ತಾಯಿಯಲ್ಲಿನ ಧೈರ್ಯವನ್ನು ಹಾಗೂ ಧೀಮಂತಿಕೆಯನ್ನು ತಮ್ಮಲ್ಲಿ ಮೈಗೂಡಿಸಿಕೊಂಡರು ಬೈರಪ್ಪ. ಆದರೆ, ಬಾಲ್ಯದಲ್ಲೇ ಅವರು ತಮ್ಮ ತಾಯಿಯನ್ನೂ ಕಳೆದುಕೊಂಡರು.

ಅಲ್ಲಿಂದ ಮುಂದಕ್ಕೆ ಅವರು ಪಟ್ಟಕಷ್ಟಗಳು ಅಷ್ಟಿಷ್ಟಲ್ಲ. ಆಗ ಅನುಭವಿಸಿದ ಕಷ್ಟಗಳು, ಅಪಮಾನಗಳೇ ಅವರ ಮುಂದಿನ ವೈಚಾರಿಕ ಸಾಹಿತ್ಯಕ್ಕೆ ಪ್ರೇರಣೆಯಾಯಿತು. ಪ್ರತಿಯೊಂದನ್ನು ವಿಶ್ಲೇಷಣಾತ್ಮಕವಾಗಿ ಪರಿಶೀಲಿಸುವ, ಪರಿಶೋಧಿಸುವ ಹಾಗೂ ಅಂಥ ಪ್ರಯೋಗಗಳಲ್ಲಿ ತಾವು ಕಂಡುಕೊಂಡ ಸತ್ಯಗಳನ್ನು ಅಷ್ಟೇ ಪ್ರಾಮಾಣಿಕವಾಗಿ ಲೇಖನಿಯ ಮೂಲಕ ಹೊರಹಾಕುವಂಥ ನಿಷ್ಠುರತೆ ಅವರದ್ದಾಯಿತು.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದರು. ಹಲವಾರು ವೈಚಾರಿಕ ಸಾಹಿತ್ಯವನ್ನು ರಚಿಸಿದವರು. ಅವರ ಹಲವಾರು ಪುಸ್ತಕಗಳು ಭಾರತೀಯ ಭಾಷೆಗಳು ಮಾತ್ರವಲ್ಲದೆ ವಿದೇಶಗಳ ಭಾಷೆಗಳಿಗೂ ತರ್ಜುಮೆಯಾಗಿದೆ. ಅವರ ಹಲವಾರು ಕಾದಂಬರಿಗಳು ಹಲವಾರು ಬಾರಿ ಮರುಮುದ್ರಣಗಳನ್ನು ಕಂಡಿದ್ದು ಅವರ ಕಾದಂಬರಿಗಳ ಜನಪ್ರಿಯತೆಗೆ ಸಾಕ್ಷಿ. ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಇವರಿಗೆ 2022ರಲ್ಲಿ ಕೇಂದ್ರ ಸರ್ಕಾರ, ಪದ್ಮಭೂಷಣ ಗೌರವ ನೀಡಿತ್ತು.

ಇದನ್ನೂ ಓದಿ