100 ವರ್ಷಗಳಲ್ಲಿ ಒಮ್ಮೆ ಗೋಚರಿಸುತ್ತಂತೆ ಈ ಸೂರ್ಯಗ್ರಹಣ: 6 ನಿಮಿಷಗಳ ಕಾಲ ಕತ್ತಲಲ್ಲಿ ಮುಳುಗಲಿದೆ ಭೂಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಗತ್ತಿನಲ್ಲಿ ಅತ್ಯಂತ ವಿಶೇಷ ಹಾಗೂ ಅಪರೂಪದ ಪೂರ್ಣ ಸೂರ್ಯಗ್ರಹಣವೊಂದನ್ನು 2027ರ ಆಗಸ್ಟ್ 2ರಂದು ನಡೆಯಲಿದೆ. ಈ ಸೂರ್ಯಗ್ರಹಣವು ಸುಮಾರು 6 ನಿಮಿಷ 23 ಸೆಕೆಂಡುಗಳ ಕಾಲ ನಡೆಯಲಿದ್ದು, ಇದು 1991ರಿಂದ 2114ರವರೆಗೆ ಸಂಭವಿಸುವ ಅತ್ಯಂತ ದೀರ್ಘ ಸೂರ್ಯಗ್ರಹಣವಾಗಿದೆ.

ಈ ಅಪರೂಪದ ಆಕಾಶಘಟನೆಯು ಯುರೋಪ್, ಉತ್ತರ ಆಫ್ರಿಕಾ ಮತ್ತು ಅರೇಬಿಯನ್ ಖಂಡದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಇದರ ಪೂರ್ಣ ಗ್ರಹಣ ಮಾರ್ಗವು ಸುಮಾರು 275 ಕಿಲೋಮೀಟರ್ ಅಗಲವಿದ್ದು, ಇದು ಅಟ್ಲಾಂಟಿಕ್ ಮಹಾಸಾಗರದಿಂದ ಪ್ರಾರಂಭವಾಗಿ ದಕ್ಷಿಣ ಸ್ಪೇನ್, ಜಿಬ್ರಾಲ್ಟರ್, ಮೊರಾಕೊ, ಅಲ್ಜೀರಿಯಾ, ಟುನೀಷಿಯಾ, ಲಿಬಿಯಾ, ಈಜಿಪ್ಟ್, ಸೌದಿ ಅರೇಬಿಯಾ, ಯೆಮೆನ್ ಹಾಗೂ ಸೊಮಾಲಿಯಾದ ಭಾಗಗಳಿಗೆ ವ್ಯಾಪಿಸಲಿದೆ.

ವಿಶೇಷವಾಗಿ ಈಜಿಪ್ಟ್‌ನ ಐತಿಹಾಸಿಕ ನಗರ ಲಕ್ಸರ್ ಪ್ರದೇಶದಲ್ಲಿ ಸೂರ್ಯನು 6 ನಿಮಿಷಗಳ ಕಾಲ ಸಂಪೂರ್ಣವಾಗಿ ಕಾಣೆಯಾಗುವ ನಿರೀಕ್ಷೆಯಿದೆ. ಲಿಬಿಯಾದ ಬೆಂಗಾಜಿ ನಗರ, ಇಟಾಲಿಯ ದ್ವೀಪ ಲ್ಯಾಂಪೆಡೂಸಾ ಮತ್ತು ಸೌದಿ ಅರೇಬಿಯಾದ ಜೆಡ್ಡಾ, ಮೆಕ್ಕಾ ಮುಂತಾದ ನಗರಗಳು ಈ ಅಪರೂಪದ ಗ್ರಹಣವನ್ನು ಸ್ಪಷ್ಟವಾಗಿ ಕಾಣಬಹುದಾದ ಸ್ಥಳಗಳಾಗಿವೆ.

ಈ ಸಮಯದಲ್ಲಿ ಭೂಮಿಯ ಬಹುಪಾಲು ಭಾಗ ಕತ್ತಲಲ್ಲಿ ಮುಳುಗಲಿದ್ದು, ಖಗೋಳಶಾಸ್ತ್ರಕ್ಕೆ ಆಸಕ್ತಿ ಇರುವವರಿಗೆ, ಛಾಯಾಗ್ರಾಹಕರಿಗೆ ಮತ್ತು ವಿಜ್ಞಾನಿಗಳಿಗೆ ಈ ಸೂರ್ಯಗ್ರಹಣ ಜೀವನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ ಅನುಭವವಾಗಲಿದೆ.

ಇದಾದ ನಂತರ ಇಂತಹ ದೀರ್ಘಸೂರ್ಯಗ್ರಹಣವು ಮತ್ತೆ 2117ರಲ್ಲಿ ಮಾತ್ರ ಸಂಭವಿಸಲಿರುವುದರಿಂದ, ಈ ಅಪೂರ್ವ ಕ್ಷಣವನ್ನು ಅನುಭವಿಸಲು ಅನೇಕರು ಈಗಾಗಲೇ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿರುವುದರಿಂದ, ಆಸಕ್ತರು ಆಫ್ರಿಕಾದ ಈಜಿಪ್ಟ್ ಅಥವಾ ಲಿಬಿಯಾ ಕಡೆಗೆ ಪ್ರಯಾಣ ಮಾಡುವ ಯೋಜನೆ ಮಾಡಬಹುದು.

ಸೂರ್ಯಗ್ರಹಣದ ಇತಿಹಾಸದಲ್ಲಿ ದಾಖಲೆ:
ಪ್ರಸ್ತುತ ದಾಖಲೆ ಪ್ರಕಾರ, ಇತಿಹಾಸದಲ್ಲೇ ಅತಿ ದೀರ್ಘವಾದ ಸೂರ್ಯಗ್ರಹಣ ಕ್ರಿ.ಪೂ. 743ರಲ್ಲಿ ಸಂಭವಿಸಿತ್ತು. ಅದು 7 ನಿಮಿಷ 28 ಸೆಕೆಂಡುಗಳ ಕಾಲ ಭೂಮಿಯನ್ನು ಕತ್ತಲೆಯಿಂದ ಆವೃತ ಮಾಡಿತ್ತು.

ಈ ಹಿನ್ನೆಲೆಯಲ್ಲಿ, 2027ರ ಸೂರ್ಯಗ್ರಹಣವನ್ನು ಸಾಕ್ಷಿಯಾಗುವುದು ಒಂದು ಅಪರೂಪದ ಅವಕಾಶವಾಗಿದ್ದು, ಜಗತ್ತಿನ ಅನೇಕ ಭಾಗಗಳಲ್ಲಿ ಖಗೋಳ ವಿಜ್ಞಾನಿಗಳಿಗೆ ಈ ದಿನ ಅತ್ಯಂತ ಪ್ರಾಮುಖ್ಯತೆಯ ದಿನವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!