ಹೊಸದಿಗಂತ ಡಿಜಿಟಲ್ ಡೆಸ್ಕ್:
“ದೇವರಾಜ ಅರಸು ಅವರ ದಾಖಲೆಯನ್ನು ಮುರಿದೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿರುವುದು 2026ರ ದೊಡ್ಡ ಹಾಸ್ಯ,” ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ನಮ್ಮನ್ನೆಲ್ಲ ಬೆಳೆಸಿದ್ದು ದೇವರಾಜ ಅರಸು ಅವರು. ಅಂದು ಅರಸು ಮತ್ತು ಇಂದಿರಾಗಾಂಧಿಯವರನ್ನು ಸಿದ್ದರಾಮಯ್ಯನವರಷ್ಟು ಟೀಕಿಸಿದವರು ಬೇರೊಬ್ಬರಿಲ್ಲ. ಆದರೆ ಇಂದು ಅಧಿಕಾರಕ್ಕಾಗಿ ಅರಸು ಅವರ ಜಪ ಮಾಡುತ್ತಿದ್ದಾರೆ,” ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅರಸು ಅವರು ಹಾವನೂರು ವರದಿಯ ಮೂಲಕ ಭದ್ರಬುನಾದಿ ಹಾಕಿಕೊಟ್ಟರು. ಆದರೆ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಹೇಳಿದ್ರು ಎಂಬ ಕಾರಣಕ್ಕೆ ವರದಿಯನ್ನು ಕಡೆಗಣಿಸಿದರು ಎಂದು ವಿಶ್ವನಾಥ್ ಆರೋಪಿಸಿದರು. “ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಸಿದ್ಧಾಂತಕ್ಕಿಂತ ‘ಅಹಿಂದ’ವೇ ಮುಖ್ಯವಾಗಿದೆ. ಅಹಿಂದವೇ ಕಾಂಗ್ರೆಸ್ ಎನ್ನುವಂತೆ ಅವರು ವರ್ತಿಸುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದರು.

