ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿತ್ರೀಕರಣದ ವೇಳೆ ತೆಲುಗು ನಟ ಜೂ. ಎನ್ಟಿಆರ್ ಅವರಿಗೆ ಗಾಯವಾಗಿದೆ.
ಜೂ ಎನ್ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆದರೆ ಜೂ ಎನ್ಟಿಆರ್ ಗಾಯಗೊಂಡಿರುವುದು ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದ ವೇಳೆ ಅಲ್ಲ. ಜೂ ಎನ್ಟಿಆರ್ ಅವರು ಯಾವುದೋ ಖಾಸಗಿ ಜಾಹೀರಾತಿಗಾಗಿ ಚಿತ್ರೀಕರಣ ನಡೆಸುವಾಗ ಸೆಟ್ನಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದಾರೆ. ಗಾಯ ತುಸು ಗಂಭೀರ ಸ್ವರೂಪದ್ದಾಗಿದ್ದು, ಕೆಲ ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ.
ಜೂ ಎನ್ಟಿಆರ್ ಅವರಿಗೆ ಕಾಲಿನ ಮೂಳೆ ಮುರಿತವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಘಟನೆ ನಡೆದ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಿರುವ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಜೂ ಎನ್ಟಿಆರ್ ಅವರಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎನ್ಟಿಆರ್ ಅವರ ಮಾಧ್ಯಮ ವ್ಯವಸ್ಥಾಪಕ, ‘ಜೂ ಎನ್ಟಿಆರ್ ಅವರು ಖಾಸಗಿ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪೂರ್ಣ ಗುಣಮುಖರಾಗಲು ಅವರು ಕೆಲ ವಾರಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅವರು ಆರೋಗ್ಯವಾಗಿದ್ದು, ಯಾವುದೇ ಆತಂಕದ ಅಗ್ಯವಿಲ್ಲ. ಅವರ ಆರೋಗ್ಯದ ಕುರಿತಾಗಿ ಯಾವುದೇ ಸುಳ್ಳು ಸುದ್ದಿ ಹರಡಿಸದಂತೆ ಅಭಿಮಾನಿಗಳು, ಮಾಧ್ಯಮಗಳಲ್ಲಿ ಮನವಿ ಮಾಡುತ್ತೇವೆ’ ಎಂದಿದ್ದಾರೆ.

                                    