Friday, October 3, 2025

ಟ್ರಾಫಿಕ್ ರೂಲ್ಸ್ ಬ್ರೇಕ್: ಸಿಎಂ ಬಳಿಕ ಗೃಹ ಸಚಿವ ಪರಮೇಶ್ವರ್, ವಿಜಯೇಂದ್ರ ಕಾರಿನ ಮೇಲೂ ಬಿತ್ತು ಫೈನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಸದ್ಯ ಟ್ರಾಫಿಕ್ ರೂಲ್ಸ್, ಟ್ರಾಫಿಕ್ ಫೈನ್‌ ಸರಕಾರ ಪಾವತಿಸಲು ಶೇಕಡಾ 50% ರಷ್ಟು ರಿಯಾಯಿತಿ ನೀಡಿದೆ. ಇದುವರೆಗೆ ಲಕ್ಷಗಟ್ಟಲೆ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳು ಕ್ಲಿಯರ್‌ ಆಗಿದೆ.

ಇದೀಗ ಈ ಸಿಸಿ ಕ್ಯಾಮರಾಗಳಿಂದಲೇ ರಾಜಕೀಯ ನಾಯಕರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯ ಜನರೆಲ್ಲಾ ದಂಡ ಪಾವತಿ ಮಾಡಬೇಕಿದೆ.

ಸೆಪ್ಟೆಂಬರ್ 5 ರಂದು ರಾಜ್ಯದ ಸಿಎಂ ಸಿದ್ದರಾಮಯ್ಯನವರ ಕಾರಿನ ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡದ ಮೊತ್ತದ ಬಗ್ಗೆ ಹೊರಬಿದ್ದಿತ್ತು. ಇದೀಗ ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಳಸುವ ಕಾರಿನ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಇತ್ತ ಕರ್ನಾಟಕದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ವಾಹನ (KA04GB0555) ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದ್ದು, ರಿಯಾಯಿತಿ ದರದಲ್ಲಿ 4,500 ರೂಪಾಯಿ ದಂಡವನ್ನು ಪಾವತಿಸಿದ್ದಾರೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಟೊಯೊಟಾ ಫಾರ್ಚುನರ್ ಕಾರ್‌ಗೆ ಸಂಚಾರ ನಿಯಮ ಉಲ್ಲಂಘನೆಗಾಗಿ ಬೆಂಗಳೂರು ಸಂಚಾರ ಪೊಲೀಸರು ದಂಡ ವಿಧಿಸಿದ್ದರು. ಸೀಟ್ ಬೆಲ್ಟ್ ಧರಿಸದೆ ಆರು ಬಾರಿ ಸಂಚಾರ ಮಾಡಿದ್ದ ಸಿಎಂ ಅವರ ವಾಹನಕ್ಕೆ 50% ರಿಯಾಯಿತಿ ಆಫರ್‌ನಡಿ 2,500 ರೂಪಾಯಿ ದಂಡವನ್ನು ಪಾವತಿಸಲಾಗಿತ್ತು.

ಈ ಘಟನೆಯು ರಾಜ್ಯದ ಗಣ್ಯರೂ ಸಹ ಸಂಚಾರ ನಿಯಮಗಳಿಗೆ ಬದ್ಧರಾಗಿರಬೇಕು ಎಂಬ ಸಂದೇಶವನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ‘ನಿಯಮ ಎಲ್ಲರಿಗೂ ಒಂದೇ’ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ವಿಜಯೇಂದ್ರ ಬಳಸುವ KA03MY4545 ಕಾರಿನ ಮೇಲೆ 10 ಕೇಸ್‌ಗಳು ದಾಖಲಾಗಿದ್ದು, ಸೀಟ್ ಬೆಲ್ಟ್, ಓವರ್ ಸ್ಪೀಡ್, ಜಂಪಿಂಗ್ ಟ್ರಾಫಿಕ್ ಸಿಗ್ನಲ್, ಜೀಬ್ರಾ ಕ್ರಾಸ್ ಕ್ರಾಸಿಂಗ್ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ. ಒಟ್ಟು 10 ಕೇಸ್. 3,250 ರೂ.(ರಿಯಾಯಿತಿ) ದಂಡ ವಿಧಿಸಲಾಗಿದೆ.