ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುವರ್ಣಸೌಧದಲ್ಲಿ ಪ್ರದರ್ಶಿಸಲಾದ ಬೃಹತ್ ತ್ರಿವರ್ಣ ಧ್ವಜವು ಕೇವಲ ಒಂದು ಧ್ವಜವಲ್ಲ, ಬದಲಾಗಿ ಮುಂದಿನ ಪೀಳಿಗೆಗೆ ರಾಷ್ಟ್ರಭಕ್ತಿ ಬೆಳೆಸುವ ಶಾಶ್ವತ ಸಂದೇಶವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಳಗಾವಿಯ ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ರಾಷ್ಟ್ರಧ್ವಜ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಸುವರ್ಣಸೌಧದಲ್ಲಿ ನಡೆದ ಈ ಪ್ರಯತ್ನ ಐತಿಹಾಸಿಕ ದಾಖಲೆ ಎಂದು ಶಿವಕುಮಾರ್ ಹೇಳಿದರು. ಕಳೆದ ವರ್ಷ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಶತಮಾನೋತ್ಸವದ ಸಂದರ್ಭದಲ್ಲಿ ಸುವರ್ಣಸೌಧದಲ್ಲಿ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಹೆಗ್ಗಳಿಕೆ ಕೂಡ ಸ್ಪೀಕರ್ ಅವರಿಗೆ ಸಲ್ಲುತ್ತದೆ ಎಂದರು.
ಈ ಬಾರಿ ಧಾರವಾಡದ ಖಾದಿ ಕೇಂದ್ರದಲ್ಲಿ ತಯಾರಿಸಲಾದ ಬೃಹತ್ ತ್ರಿವರ್ಣ ಧ್ವಜವನ್ನು ಸುವರ್ಣಸೌಧದಲ್ಲಿ ಪ್ರದರ್ಶಿಸಿರುವುದು ಹೆಮ್ಮೆಯ ಸಂಗತಿ, ರಾಜ್ಯದ ಜನರ ಪರವಾಗಿ ಸ್ಪೀಕರ್ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಈ ಪ್ರದರ್ಶನವನ್ನು ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.

