ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನವಿಡೀ ಕೆಸರುಗದ್ದೆಯಲ್ಲಿ ಬೆವರು ಸುರಿಸಿ ಕೆಲಸ ಮುಗಿಸಿದ್ದ ಆ ಶ್ರಮಜೀವಿಗಳು, ಮನೆಗೆ ಮರಳುವ ತವಕದಲ್ಲಿದ್ದರು. ಆದರೆ ಕೈಕಾಲು ತೊಳೆಯಲು ಕಾಲುವೆ ಇಳಿದವರು ಮತ್ತೆ ಮರಳಿ ಬರಲೇ ಇಲ್ಲ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆ ಹೊಸೂರು ಬಳಿ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಮತ್ತು ದೇವಮ್ಮ (30) ಮೃತಪಟ್ಟ ದುರ್ದೈವಿಗಳು. ಇವರು ಆನೆ ಹೊಸೂರು ಸಮೀಪದ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕೆಲಸಕ್ಕೆ ಬಂದಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ಮುನ್ನ ಕೈಕಾಲು ಸ್ವಚ್ಛಗೊಳಿಸಿಕೊಳ್ಳಲು ಕಾಲುವೆ ಬಳಿ ಹೋದಾಗ ಈ ಅವಘಡ ಸಂಭವಿಸಿದೆ. ಒಬ್ಬರು ಕಾಲು ಜಾರಿ ಬಿದ್ದಾಗ ಅವರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಲಿಂಗಸುಗೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೀವ್ರ ಶೋಧ ನಡೆಸಿದರು. ಸತತ ಪ್ರಯತ್ನದ ನಂತರ ಇಬ್ಬರು ಮಹಿಳೆಯರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಸದ್ಯ ಮೃತದೇಹಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಲಿ ಕೆಲಸಕ್ಕೆ ಬಂದು ಪ್ರಾಣ ಕಳೆದುಕೊಂಡ ಮಹಿಳೆಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

