ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ 2026ಕ್ಕೆ ಭಾರತ ತನ್ನ ಯುವ ತಂಡವನ್ನು ಅಧಿಕೃತವಾಗಿ ಘೋಷಿಸಿದೆ. ಆಯುಷ್ ಮ್ಹಾತ್ರೆ ಗೆ ಮತ್ತೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಈ ತಂಡದಲ್ಲಿ 14 ವರ್ಷದ ಪ್ರತಿಭಾವಂತ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಆಯ್ಕೆಯಾಗಿರುವುದು ವಿಶೇಷ ಗಮನ ಸೆಳೆದಿದೆ.
ಅಂಡರ್-19 ವಿಶ್ವಕಪ್ ಟೂರ್ನಮೆಂಟ್ ಜನವರಿ 15ರಿಂದ ಫೆಬ್ರವರಿ 6ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದ್ದು, ಭಾರತವನ್ನು ನ್ಯೂಜಿಲೆಂಡ್, ಯುನೈಟೆಡ್ ಸ್ಟೇಟ್ಸ್ ಹಾಗೂ ಬಾಂಗ್ಲಾದೇಶದೊಂದಿಗೆ ಬಿ ಗುಂಪಿನಲ್ಲಿ ಸೇರಿಸಲಾಗಿದೆ.
ಟೀಂ ಇಂಡಿಯಾ ಜನವರಿ 15ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಮೊದಲ ಗುಂಪು ಪಂದ್ಯ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ಜನವರಿ 17ರಂದು ಬಾಂಗ್ಲಾದೇಶ ಮತ್ತು ಜನವರಿ 24ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಟೂರ್ನಿಯ ಅಂತಿಮ ಪಂದ್ಯ ಜಿಂಬಾಬ್ವೆಯ ಹರಾರೆಯಲ್ಲಿ ನಡೆಯಲಿದೆ.
ಭಾರತ ತಂಡದಲ್ಲಿ ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ ಸೇರಿದಂತೆ ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರ್ವಂಶ್ ಸಿಂಗ್, ಆರ್.ಎಸ್. ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಡಿ. ದೀಪೇಶ್, ಕಿಶನ್ ಕುಮಾರ್ ಸಿಂಗ್ ಮತ್ತು ಉದ್ಧವ್ ಮೋಹನ್ ಸ್ಥಾನ ಪಡೆದಿದ್ದಾರೆ. ಯುವ ಪ್ರತಿಭೆಗಳ ಮೇಲೆ ಭಾರೀ ನಿರೀಕ್ಷೆ ಮೂಡಿದೆ.

